ಸಿಎಂ ನಿರ್ಧಾರಗಳಿಗೆ ಹೈಕಮಾಂಡ್ ಬ್ರೇಕ್

28/11/2020

ಬೆಂಗಳೂರು ನ.28 : ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರತ್ತ ನೆಟ್ಟಿದೆ. ಈ ಬೆಳವಣಿಗೆ ನಡುವೆಯೇ ದಿಢೀರ್ ಎಂದು ಹೈಕಮಾಂಡ್‍ನಿಂದ ದೂರವಾಣಿ ಕರೆಯೊಂದು ಬಂದು ಯಡಿಯೂರಪ್ಪ ಅವರ ವೇಗಕ್ಕೆ ತಡೆ ನೀಡಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರಿಗೆ ಇಂದು ಬೆಳಗ್ಗೆ ಕರೆ ಮಾಡಿ ರಾಜಕೀಯ ತೀರ್ಮಾನಗಳಿಗೆ ನಿಯಂತ್ರಣ ಹೇರಿಕೊಳ್ಳುವಂತೆ ಸೂಚನೆ ನೀಡಿದರು.
ನಿಗಮ-ಮಂಡಳಿಗಳಿಗೆ ನೇಮಕ, ಸಂಪನ್ಮೂಲ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚನೆ, ಸಾಲು ಸಾಲು ನಿಗಮಗಳ ರಚನೆ ಮಾಡುವ ಮೂಲಕ ಯಡಿಯೂರಪ್ಪ ವರಿಷ್ಠರಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದ್ದರು. ಲಿಂಗಾಯಿತ ಮತ್ತು ವೀರಶೈವ ಸಮುದಾಯಕ್ಕೆ ಮೀಸಲಾತಿ ಪ್ರಕಟಿಸಲು ಮುಂದಾಗಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಡಿಸೆಂಬರ್ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಲು ಹೈಕಮಾಂಡ್ ಸೂಚಿಸಿದೆ ಎಂಬ ಊಹಾಪೋಹದ ಸುದ್ದಿಗಳು ಬಿಜೆಪಿಯಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಯಡಿಯೂರಪ್ಪ ಅವರೂ ಒಂದಾದ ಮೇಲೊಂದರಂತೆ ದಿಢೀರ್ ನಿರ್ಧಾರಗಳನ್ನು ಕೈಗೊಂಡು ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಇದು ರಾಜಕೀಯವಾಗಿ ಭಾರೀ ಕುತೂಹಲ ಕೆರಳಿಸಿದೆ.