ಪಾಕ್ ದಾಳಿಗೆ ಇಬ್ಬರು ಸೈನಿಕರು ಹುತಾತ್ಮ

28/11/2020

ಶ್ರೀನಗರ ನ.28 : ಪದೇ ಪದೇ ಕಾಲು ಕರೆದು ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ, ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ತೀವ್ರ ಶೆಲ್ಲಿಂಗ್ ನಲ್ಲಿ ಭಾರತ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್ ಒಸಿ (ಗಡಿ ನಿಯಂತ್ರಣ ರೇಖೆ)ಯಲ್ಲಿನ ಸುಂದರ್ ಬನ್ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಸೇನೆಯ ತೀವ್ರ ಶೆಲ್ಲಿಂಗ್ ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಹುತಾತ್ಮ ಯೋಧರನ್ನು ನಾಯಕ್ ಪ್ರೇಮ್ ಬಹದ್ದೂರ್ ಖತ್ರಿ ಮತ್ತು ರೈಫಲ್ಮನ್ ಸುಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸೈನಿಕರನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇನ್ನು ಗುರುವಾರ ಕೂಡ ಸುಬೇದಾರ್ ಸ್ವತಂತ್ರ ಸಿಂಗ್ ಎಂಬ ಯೋಧರು ಪೂಂಚ್ ಜಿಲ್ಲೆಯ ಕಿರ್ನಿ ಮತ್ತು ಕಸ್ಬಾ ಸೆಕ್ಟರ್ ನಲ್ಲಿ ಪಾಕಿಸ್ತಾನದ ಶೆಲ್ಲಿಂಗ್ ನಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.