ಅತ್ಯಾಚಾರಿಗಳು ನಪುಂಸಕರಾಗುತ್ತಾರೆ !

28/11/2020

ಇಸ್ಲಾಮಾಬಾದ್ ನ.28 : ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸಚಿವ ಸಂಪುಟ ಎರಡು ಮಹತ್ವದ ನಿರ್ಧಾರ ಕೈಗೊಂಡಿದ್ದು, ಅತ್ಯಾಚಾರಿಗಳನ್ನು ನಪುಂಸಕಗೊಳಿಸುವ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಗೆ ವಿಶೇಷ ಕೋರ್ಟ್ ಗೆ ಸ್ಥಾಪನೆಗೆ ಅನುಮೋದನೆ ನೀಡಿದೆ.
ಫೆಡರಲ್ ಕಾನೂನು ಸಚಿವ ಫರೋಘ್ ನಸೀಮ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶಾಸಕಾಂಗ ಪ್ರಕರಣಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಅತ್ಯಾಚಾರ ವಿರೋಧಿ(ತನಿಖೆ ಮತ್ತು ವಿಚಾರಣೆ) ಸುಗ್ರೀವಾಜ್ಞೆ 2020 ಮತ್ತು ಅಪರಾಧ ಕಾನೂನು(ತಿದ್ದುಪಡಿ) ಸುಗ್ರೀವಾಜ್ಞೆ 2020ಕ್ಕೆ ಅನುಮೋದನೆ ನೀಡಲಾಗಿತ್ತು.
ಕೇಂದ್ರ ಸಂಪುಟ ಸಭೆಯಲ್ಲಿ ಪಾಕ್ ಕಾನೂನು ಸಚಿವರು ಅತ್ಯಾಚಾರ ವಿರೋಧಿ ಕರುಡನ್ನು ಮಂಡನೆ ಮಾಡಿದ್ದು, ಇದಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸುಗ್ರೀವಾಜ್ಞೆಗೆ ಅನುಮೋದನೆ ಸೂಚಿಸಿದ್ದಾರೆ. ಜೊತೆಗೆ ಈ ಕಾಯ್ದೆಯ ಪ್ರಕಾರ ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ತ್ವರಿತ ರೀತಿಯಲ್ಲಿ ವಿಚಾರಣೆ ಮಾಡಬೇಕು. ಪೊಲೀಸರು ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳಬೇಕು. ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಹೆಚ್ಚು ಮಹಿಳಾ ಪೊಲೀಸರು ಭಾಗವಹಿಸಬೇಕು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.