ಆಸ್ಟ್ರೇಲಿಯಾಗೆ ಶರಣಾದ ಕೊಹ್ಲಿ ಪಡೆ

28/11/2020

ಸಿಡ್ನಿ ನ.27 : ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಡೆ 66 ರನ್ ಗಳಿಂದ ಆಸ್ಟ್ರೇಲಿಯಾಗೆ ಶರಣಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ನಾಯಕ ಆಯರೋನ್ ಫಿಂಚ್ ಮತ್ತು ಸ್ಟೀವೆನ್ ಸ್ಮಿತ್ ಭರ್ಜರಿ ಶತಕ ಗಳಿಸಿದರೆ, ಸ್ಫೋಟಕ ಬ್ಯಾಟ್ಸಮನ್ ಆರ್ಧ ಶತಕ ಗಳಿಸಿ ಆಸಿಸ್ ಬೃಹತ್ ಮೊತ್ತಕ್ಕೆ ಕಾರಣರಾದರು. ಆ ಮೂಲಕ ಫಿಂಚ್ ಪಡೆ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿತು.
ಆಸ್ಟ್ರೇಲಿಯಾ ನೀಡಿದ 375 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಪೇರಿಸಿದ್ದು 66 ರನ್ ಗಳಿಂದ ಸೋಲು ಕಂಡಿದೆ. ಟೀಂ ಇಂಡಿಯಾ ಪರ ಮಾಯಾಂಕ್ ಅಗರವಾಲ್ 22, ಶಿಖರ್ ಧವನ್ 74, ವಿರಾಟ್ ಕೊಹ್ಲಿ 21, ಹಾರ್ದಿಕ್ ಪಾಂಡ್ಯ 90, ರವೀಂದ್ರ ಜಡೇಜಾ 25 ಮತ್ತು ಸೈನಿ ಅಜೇಯ 29 ರನ್ ಪೇರಿಸಿದ್ದಾರೆ.
ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಆಡಂ ಜಂಪಾ 4, ಹೇಜಲ್ ವುಡ್ 3 ಮತ್ತು ಸ್ಟಾರ್ಕ್ 1 ವಿಕೆಟ್ ಪಡೆದಿದ್ದಾರೆ.
ಮೊದಲು ಕ್ರೀಸ್ ಗೆ ಆಗಮಿಸಿದ ನಾಯಕ ಫಿಂಚ್ ಹಾಗೂ ಡೇವಿಡ್ ವಾರ್ನರ್ ಜೋಡಿ ಮೊದಲ ವಿಕೆಟ್ ಗೆ ಬರೊಬ್ಬರಿ 156 ರನ್ ಗಳ ಜೊತೆಯಾಟವಾಡಿತು. ಈ ಹಂತದಲ್ಲಿ 69 ರನ್ ಗಳಿಸಿದ್ದ ವಾರ್ನರ್ ಶಮಿ ಬೌಲಿಂಗ್ ನಲ್ಲಿ ರಾಹುಲ್ ಗೆ ಕ್ಯಾಚ್ ನೀಡಿ ಹೊರ ನಡೆದರು. ಬಳಿಕ ಸ್ಮಿತ್ ಜೊತೆ ಗೂಡಿದ ಫಿಂಚ್ ತಮ್ಮ ರನ್ ಬೇಟೆ ಮುಂದುವರೆಸಿದರು. ಕೇವಲ 124 ಎಸೆತಗಳಲ್ಲಿ ಫಿಂಚ್ 114 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ರಾಹುಲ್ ಗೆ ಕ್ಯಾಚ್ ನೀಡಿ ಔಟ್ ಆದರು.