ಬೊಳುಗಲ್ಲು ನಿವಾಸಿಗಳಿಗೆ ರಸ್ತೆ ನಿರ್ಮಿಸಿ ಕೊಟ್ಟ ಎ.ಎಸ್.ಪೊನ್ನಣ್ಣ

28/11/2020

ಮಡಿಕೇರಿ ನ.28 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ನ ಚೆಂಬು ಗ್ರಾಮದ ಬೊಳುಗಲ್ಲು ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿದ ಕೆಪಿಸಿಸಿ ವಕ್ತಾರ ಹಾಗೂ ಕೆಪಿಸಿಸಿ ಕಾನೂನು ಮಾನವಹಕ್ಕು ಮತ್ತು ಆರ್‍ಟಿಐ ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ಎಂಟರಿಂದ ಹತ್ತು ಮನೆಗಳಿಗೆ ರಸ್ತೆ ಸೌಲಭ್ಯ ಕಲ್ಪಿಸಿ ಜನಮೆಚ್ಚುಗೆ ಪಡೆದಿದ್ದಾರೆ.
ಕಳೆದ 20 ವರ್ಷಗಳಿಂದ ಸಮರ್ಪಕವಾದ ರಸ್ತೆ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದರು. ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ತಲೆಯಲ್ಲಿ ಹೊತ್ತುಕೊಂಡು ಕಾಲುದಾರಿಯಲ್ಲೇ ಸಾಗಬೇಕಾದ ಅನಿವಾರ್ಯತೆ ಇತ್ತು.
ಇತ್ತೀಚೆಗೆ ಎ.ಎಸ್.ಪೊನ್ನಣ್ಣ ಅವರು ಚೆಂಬು ವಲಯ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ ಸ್ಥಳೀಯ ನಿವಾಸಿಗಳು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದರು. ತಕ್ಷಣ ಸ್ಪಂದಿಸಿದ ಪೊನ್ನಣ್ಣ ಅವರು ಸುಮಾರು 700 ಮೀಟರ್ ಉದ್ದದ ಸಂಪರ್ಕ ರಸ್ತೆಯನ್ನು ಕಲ್ಪಿಸುವ ಕಾರ್ಯ ಮಾಡಿದರು.
ಗ್ರಾಮದ ಹಿರಿಯರಾದ ಗುಂಡಿಮಜಲು ಗಣಪಯ್ಯ ಅವರು ಪೂಜೆ ಸಲ್ಲಿಸುವ ಮೂಲಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಪ್ರಾಸ್ತವಿಕವಾಗಿ ಮಾತನಾಡಿದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಜನಸಾಮಾನ್ಯರ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷ ಸದಾ ಸ್ಪಂದಿಸಲಿದೆ. ಎ.ಎಸ್.ಪೊನ್ನಣ್ಣ ಅವರು ಜನಪರ ಕಾಳಜಿ ಹೊಂದಿರುವ ಸಮರ್ಥ ನಾಯಕರಾಗಿದ್ದು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.

ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಹಿರಿಯ ಮುಖಂಡ ಎನ್.ಸಿ.ಮನೋಹರ್, ನಿಕಟಪೂರ್ವ ವಲಯಾಧ್ಯಕ್ಷ ಕೆ.ಸಿ.ಸುರೇಶ್, ಬ್ಲಾಕ್ ಸದಸ್ಯ ರಘುನಾಥ್, ಯುವ ಕಾಂಗ್ರೆಸ್ಸಿನ ಗುಣವಂತ ಹಾಗೂ ಚಿದಾನಂದ ಅಂಬೆಕಲ್ಲು ಅವರುಗಳು ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಕೊಂಪುಳಿ ಮೋಹನ್, ಮನೋಜ್ ಕಾಡುಪಂಜ, ಸತೀಶ್, ಮಿಥುನ್, ಉದಯ ಆನ್ಯಾಳ, ಚಂದ್ರಶೇಖರ ಬಳ್ಳಕ್ಕ, ಮಿಲನ್ ಮೋಹನ್, ನಿಹಾರ್ ನಿಡಿಂಜಿ, ತೆಂಕಿಲ ಗಿರೀಶ್, ಮಲ್ಲಿಕಾರ್ಜುನ ಕುದುಕುಳಿ ಮತ್ತಿತರ ಗ್ರಾಮಸ್ಥರು ಹಾಜರಿದ್ದರು.
ಜೋಯ್ ಜೋಸೆಫ್, ಚಂದ್ರಶೇಖರ್, ಬೊಳುಗಲ್ಲು ರವಿ, ಲಿಂಗಪ್ಪ, ಚೆನ್ನಮ್ಮ, ಪುಷ್ಪನಾಯ್ಕ ಹಾಗೂ ಸ್ಥಳೀಯರ ಮನೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಯಿತು.
ಸಿಡಿಲು ಬಡಿದು ಮನೆ ಹಾನಿಗೊಳಗಾದ ಕಾಚೇಲು ವಾಸುದೇವ ಅವರಿಗೆ ಎ.ಎಸ್.ಪೊನ್ನಣ್ಣ ಅವರು ಕೆಲವು ದಿನಗಳ ಹಿಂದೆ ಆರ್ಥಿಕ ನೆರವನ್ನು ನೀಡಿದ್ದನ್ನು ಗ್ರಾಮಸ್ಥರು ಇದೇ ಸಂದರ್ಭ ನೆನಪಿಸಿಕೊಂಡರು.