ಬೀದಿ ರಂಪ ಮಾಡಿದವರಿಗೆ ಸಚಿವ ಸ್ಥಾನ ಬೇಡ, ನಿಷ್ಠಾವಂತರಿಗೆ ನೀಡಿ : ಶಾಸಕ ಅಪ್ಪಚ್ಚುರಂಜನ್ ಒತ್ತಾಯ

November 28, 2020

ಮಡಿಕೇರಿ ನ.28 : ಪಕ್ಷ ನಿಷ್ಠೆ ತೋರಿದವರಿಗೆ ಸಚಿವ ಸ್ಥಾನ ನೀಡಬೇಕೆ ಹೊರತು ಬೀದಿ ರಂಪ ಮಾಡಿದವರಿಗೆ ಅಲ್ಲವೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಐದು ಬಾರಿ ಶಾಸಕನಾಗಿದ್ದು, ಪಕ್ಷÀಕ್ಕೆ ಕುಂದು ಬಾರದ ರೀತಿಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇನೆ. ನನಗೂ ಮಂತ್ರಿಸ್ಥಾನ ನೀಡಲಿ, ಈ ಬಗ್ಗೆ ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದೇನೆ ಎಂದರು. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಮತ್ತು ಐದು, ಆರು ಬಾರಿ ಗೆದ್ದವರಿಗೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಪಕ್ಷಕ್ಕೆ ನಿಷ್ಠೆಯಿಂದ ಬೀದಿ ರಂಪ ಮಾಡದೆ ಸುಮ್ಮನಿರುವವರನ್ನು ಕಡೆಗಣಿಸಬಾರದು. ಐದು, ಆರು ಬಾರಿ ಗೆದ್ದವರನ್ನು ಮಂತ್ರಿ ಮಾಡಬೇಕು. ಮತ್ತೆ ಮತ್ತೆ ಮಂತ್ರಿಗಳಾಗುವವರನ್ನು ಕೈಬಿಟ್ಟು ಅವಕಾಶ ಸಿಗದೇ ಇರುವವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಪಕ್ಷದ ಘನತೆ ಗೌರವ ಉಳಿಸಿದವರಿಗೆ ಅವಕಾಶ ನೀಡದೆ ಬೀದಿ ರಂಪ ಮಾಡಿದವರಿಗೆ ಅವಕಾಶ ಕಲ್ಪಿಸಿದರೆ ಅರ್ಥವಿಲ್ಲ ಎಂದು ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು.

error: Content is protected !!