ಕರಿಕೆಯಲ್ಲಿ ಸಭೆ : ಕಾನೂನಿನ ಚೌಕಟ್ಟಿನಡಿ ಹಕ್ಕುಪತ್ರ ನೀಡಲು ಪ್ರಾಮಾಣಿಕ ಪ್ರಯತ್ನ : ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ ಭರವಸೆ

November 29, 2020

ಮಡಿಕೇರಿ ನ.29 : ಕಳೆದ ಕೆಲವು ವರ್ಷಗಳಿಂದ ವಿಲೇವಾರಿಯಾಗದೆ ಇರುವ ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಕಾನೂನಿನ ಚೌಕಟ್ಟಿನಡಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಭರವಸೆ ನೀಡಿದ್ದಾರೆ.
ಕರಿಕೆಯ ಎಳ್ಳು ಕೊಚ್ಚಿ ಸಹಕಾರ ಭವನದಲ್ಲಿ ನಡೆದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಗ್ರಾ.ಪಂ ವ್ಯಾಪ್ತಿಯ ಅರ್ಜಿದಾರರ ಅಹವಾಲು ಆಲಿಸಿದ ಅವರು, ಎರಡು ತಿಂಗಳೊಳಗೆ ಗ್ರಾಮ ಮಟ್ಟದಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ ಸದಸ್ಯರು ಹಾಗೂ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕವಿತಾ ಪ್ರಭಾಕರ್ ತಾಲ್ಲೂಕು ಕಛೇರಿಯಲ್ಲಿ ಸಾಕಷ್ಟು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, 94 ಸಿ, ನಮೂನೆ 50-53, ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಕಡತ ಗುರುತಿಸಿ ಹಕ್ಕುಪತ್ರ ಕೊಡಿಸಲು ಪ್ರಯತ್ನ ಪಡುವುದಾಗಿ ಹೇಳಿದರು.
ಸಮಿತಿಯ ಮತ್ತೊಬ್ಬ ಸದಸ್ಯ ಸಂಪಾಜೆಯ ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ ಜಮೀನಿನ ದಾಖಲೆಗಳ ಸಮಸ್ಯೆಯಿಂದ ಜನ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಗಮನ ಸೆಳೆದರು.
ಅಧ್ಯಕ್ಷ ರವಿಕುಶಾಲಪ್ಪ ಮಾತನಾಡಿ ಜಿಲಾ ಕೇಂದ್ರ ಸ್ಥಾನ ಮಡಿಕೇರಿಯಿಂದ 70 ಕಿ.ಮೀ ದೂರದಲ್ಲಿ ಕರಿಕೆ ಗ್ರಾಮವಿದ್ದು, ಕೂಲಿ ಕಾರ್ಮಿಕರೇ ಹೆಚ್ಚಾಗಿರುವುದರಿಂದ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಎರಡು ತಿಂಗಳ ಕಾಲವಕಾಶಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದೇಶ ಬಂದ ತಕ್ಷಣ ಅರ್ಜಿ ಸಲ್ಲಿಸದವರು ಸಲ್ಲಿಸಬಹುದೆಂದು ತಿಳಿಸಿದರು.
ವಾರದ ಸೋಮವಾರ ಮತ್ತು ಶುಕ್ರವಾರ ಮಡಿಕೇರಿ ಕಛೇರಿಯಲ್ಲಿ ಸಾರ್ವಜನಿಕರ ಸಂಪರ್ಕಕ್ಕೆ ತಾವು ಲಭ್ಯವಿದ್ದು, ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು ಎಂದರು. ತಾಲ್ಲೂಕಿನಲ್ಲಿ ಸರ್ವೇಯರ್ ಕೊರತೆಯಿದ್ದು, ಈ ಬಗ್ಗೆ ಕಂದಾಯ ಸಚಿವರ ಗಮನ ಸೆಳೆಯಲಾಗಿದೆ ಎಂದು ರವಿಕುಶಾಲಪ್ಪ ವಿವರಿಸಿದರು.
ಸಮಿತಿ ಸದಸ್ಯ ಮಿಟ್ಟು ರಂಜಿತ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಿಮ್ಮುಡಿ ಜಗದೀಶ್, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಕೆ.ಎ.ನಾರಾಯಣ ಹಾಗೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಹೊಸಮನೆ ಹರೀಶ್ ಸ್ವಾಗತಿಸಿ, ವಂದಿಸಿದರು.

error: Content is protected !!