ಮಧ್ಯ ಪ್ರದೇಶದಲ್ಲಿ 26 ಹುಲಿಗಳ ಸಾವು

30/11/2020

ನವದೆಹಲಿ ನ.30 : 2020 ಅಂದರೆ ಪ್ರಸಕ್ತ ವರ್ಷದಲ್ಲಿ ಕರ್ನಾಟಕದಲ್ಲಿ 8 ಮತ್ತು ಮಧ್ಯ ಪ್ರದೇಶದಲ್ಲಿ 26 ಹುಲಿಗಳ ಸಾವು ಸಂಭವಿಸಿದೆ ಎಂದು ಅಂಕಿಅಂಶಗಳ ಮೂಲಕ ತಿಳಿದು ಬಂದಿದೆ.
ಹುಲಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ 8 ಹುಲಿಗಳು ಮೃತಪಟ್ಟಿದ್ದು, ಈ ಪೈಕಿ ಎರಡು ಹುಲಿಗಳು ಬೇಟೆಗಾರರ ದಾಳಿಗೆ ಬಲಿಯಾಗಿವೆ. ಕಳೆದ ವರ್ಷ ರಾಜ್ಯದಲ್ಲಿ 12 ಹುಲಿಗಳು ಮೃತಪಟ್ಟಿದ್ದವು. ಕರ್ನಾಟಕದಂತೆಯೇ ಮಧ್ಯ ಪ್ರದೇಶದಲ್ಲೂ ಈ ವರ್ಷ ಹುಲಿಗಳ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಪ್ರಸಕ್ತ ವರ್ಷ ಇಲ್ಲಿ 26 ಹುಲಿಗಳು ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.
ಸಾವನ್ನಪ್ಪಿದ ವ್ಯಾಘ್ರಗಳ ಕುರಿತ ಮಾಹಿತಿಯನ್ನು ಪ್ರಾಧಿಕಾರದ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಸಾವನ್ನಪ್ಪಿದ ಪೈಕಿ, ವಿವಿಧ ಸಂರಕ್ಷಿತ ಅರಣ್ಯದಲ್ಲಿನ 21 ಹುಲಿಗಳು ಸಾವನ್ನಪ್ಪಿದ್ದರೆ, ಬಾಂಧವಗಡ ಹುಲಿ ಸಂರಕ್ಷಿತಾರಣ್ಯದಲ್ಲಿ ಗರಿಷ್ಠ 10 ಹುಲಿಗಳು ಮೃತಪಟ್ಟಿವೆ ಎಂದು ಪ್ರಾಧಿಕಾರ ಪ್ರಕಟಿಸಿದೆ.