ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಕನ್ನಡ ರಾಜ್ಯೋತ್ಸವ ಆಚರಣೆ : ಸಾಧಕರಿಗೆ ಸನ್ಮಾನ

30/11/2020

ಮಡಿಕೇರಿ ನ. 30 : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ತೃತೀಯ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿಯನ್ನು ಕೆ.ಆರ್. ಹರ್ಷಿತಾ ಅವರಿಗೆ ಪ್ರದಾನ ಮಾಡುವುದರೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ ಏಳು ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಬಳಗದ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ದಿ.ಅಬ್ದುಲ್ ಹಫೀಜ್ ಸಾಗರ್ ಜ್ಞಾಪಕಾರ್ಥ ಭಾವಗೀತೆ ಸ್ಪರ್ಧೆಯ ಸಮಾರೋಪದಲ್ಲಿ, ಕನ್ನಡ ಮಾಧ್ಯಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು 603 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮರಾದ ಕೆ.ಆರ್. ಹರ್ಷಿತಾ ಅವರನ್ನು ಬಳಗದ ಗೌರವ ಸಲಹೆಗಾರರು ಹಾಗೂ ದತ್ತಿ ನಿಧಿ ಸ್ಥಾಪಕರಾದ ಟಿ.ಪಿ. ರಮೇಶ್ ಮತ್ತು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತರಾದ ಅನಿಲ್ ಎಚ್.ಟಿ. ಮಾತನಾಡಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ 1983 ರಲ್ಲಿ ಸ್ಥಾಪನೆಯಾದ ಬಳಿಕ ಇಲ್ಲಿಯವರೆಗೆ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮೆಚ್ಚುಗೆಯ ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಜಿಲ್ಲೆÉಯಲ್ಲಿ ಪ್ರಥಮವಾಗಿ ಕೊಡಗು ಉತ್ಸವವನ್ನು ಈ ಹಿಂದೆ ಆಯೋಜಿಸಿದ ಕೀರ್ತಿಯೂ ಬಳಗಕ್ಕೆ ಇದೆಯೆಂದು ತಿಳಿಸಿದರು.
ಬಳಗದ ಅಧ್ಯಕ್ಷರಾಗಿ ಬಿ.ಎ.ಷಂಶುದ್ದೀನ್, ಡಾ. ಸೂರ್ಯಕುಮಾರ್ ಸೇರಿದಂತೆ ಹಲವರು ಕಾರ್ಯನಿರ್ವಹಿಸಿಕೊಂಡು ಬಂದಿದ್ದು, ಡಾ. ಸೂರ್ಯಕುಮಾರ್ ಅವಧಿಯಲ್ಲಿ ಪ್ರತಿ ಭಾನುವಾರ ರಾಜಾಸೀಟಿನಲ್ಲಿ ಸಂಗೀತ ಸಂಜೆ ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗಿತ್ತು. ಇಂತಹ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ಬಳಗ ಯೋಜನೆಯನ್ನು ರೂಪಿಸಬೇಕೆಂದು ಸಲಹೆಯನ್ನಿತ್ತರು.
ಕೊರೊನಾ ಸಂಕಷ್ಟದ ಅವಧಿಯಲ್ಲೂ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಬಳಗದ ಪ್ರಯತ್ನ ನಿಜಕೂ ಶ್ಲಾಘನೀಯವೆಂದರು.
ಪುಸ್ತಕ ಮಳಿಗೆ ಸ್ಥಾಪನೆಗೆ ಮುಂದಾಗಿ- ಇಡೀ ರಾಜ್ಯದಲ್ಲಿ ಪುಸ್ತಕವಿಲ್ಲದ ಜಿಲ್ಲೆ ಕೊಡಗು. ಈ ಹಿನ್ನೆಲೆಯಲ್ಲಿ ಬಳಗವು ಜಿಲ್ಲೆಯಲ್ಲಿ ಪುಸ್ತಕ ಮಳಿಗೆಯನ್ನು ಆರಂಭಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಬಳಗದ ಗೌರವ ಸಲಹೆಗಾರರು ಹಾಗೂ ದತ್ತಿ ನಿಧಿ ಸ್ಥಾಪಕರಾದ ಟಿ.ಪಿ. ರಮೇಶ್ ಮಾತನಾಡಿ, ಪ್ರತಿಭಾವಂತರು ಮತ್ತು ಉದಯೋನ್ಮುಖ ಲೇಖಕರು ಮತ್ತು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಬಳಗದ್ದೆಂದು ಅಭಿಪ್ರಾಯಿಸಿ, ದ್ವಿತೀಯ ತಲೆಮಾರಿನ ಲೇಖಕರು ಮತ್ತು ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನವನ್ನು ನೀಡುವ ಮೂಲಕ ಬೆಳೆಸಬೇಕೆಂದು ಕರೆ ನೀಡಿದರು.
ಈ ಹಿಂದೆ ಕೊಡಗಿಗೆ ಸಾಹಿತ್ಯವಿಲ್ಲದ ಬಂಜೆತನ ಬಂದಿದೆ ಎನ್ನುವ ಅಪವಾದವಿತ್ತು. ಅಂತಹ ಸಂದರ್ಭ ಜಿಲ್ಲೆÉಯಲ್ಲಿ ಸಾಹಿತ್ಯಿಕ ಕ್ರಾಂತಿಯನ್ನು ಮಾಡುವ ಮೂಲಕ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯದ ಬೆಳವಣಿಗೆಗೆ ಶ್ರಮಿಸಿದ್ದರ ಪರಿಣಾಮ ಇಂದು ಸಾಕಷ್ಟು ಸಾಹಿತಿಗಳನ್ನು ಬೆಳೆಸಲು ಸಾಧ್ಯವಾಯಿತೆಂದು ತಿಳಿಸಿದರು.
ಜಿಲ್ಲೆÉಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚಿತವಾಗಿಯೇ ಲೇಖಕ ಮತ್ತು ಕಲಾವಿದರ ಬಳಗ ಅಸ್ತಿತ್ವಕ್ಕೆ ಬಂದು ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವುದಾಗಿ ಮೆಚ್ಚುಗೆಯ ನುಡಿಗಳನ್ನಾಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಇಂದು ಸನ್ಮಾನಕ್ಕೆ ಪಾತ್ರರಾದವರು ಮತ್ತಷ್ಟು ಸಾಧನೆಯನ್ನು ಮಾಡಬೇಕು ಮತ್ತು ಇತರರಿಗೆ ಪ್ರೇರಣೆಯಾಗಬೇಕೆಂದು ಕರೆ ನಿಡಿದರು.
ಸನ್ಮಾನಿತರು-ಸಮಾರಂಭದಲ್ಲಿ ಹಂಪಿ ವಿವಿಯಿಮದ ಸಂಶೋಧನೆಗಾಗಿ ಡಾಕ್ಟರೇಟ್ ಪಡೆದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತೆ ಪಿ. ರೇವತಿ ರಮೇಶ್, ಹಾಕಿ ಕ್ರೀಡೆಯಲ್ಲಿ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕøತರಾದ ಸಿ.ಎಂ. ಕರುಂಬಯ್ಯ, ಬಾಲ್ ಬ್ಯಾಡ್ಮಿಂಟನ್‍ನಲ್ಲಿ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕøತರಾದ ಲಾವಣ್ಯ ಧನಪಾಲ್, ಬಾಲ್ ಬ್ಯಾಡ್ಮಿಂಟನ್‍ನಲ್ಲಿ ರಾಜ್ಯ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕøತರಾದ ಪಲ್ಲವಿ ಎಸ್.ಕೆ., ಗುರುಕುಲ ಕಲಾ ಕುಸುಮ ಪ್ರಶಸ್ತಿ ಪುರಸ್ಕøತರಾದ ಗೀತಾ ನಾಯ್ಡು ಟಿ.ಸಿ. ಮತ್ತು 10ನೇ ತರಗತಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ಎಂ.ಎನ್. ವಿಹಾನ್ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಬಹುಮಾನ ವಿಜೇತರು- ದಿ. ಅಬ್ದುಲ್ ಹಫೀಜ್ ಸಾಗರ್ ಜ್ಞಾಪಕಾರ್ಥ ಆಯೋಜಿತ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪೂಜಿತಾ ಜಗದೀಶ್, ದ್ವಿತೀಯ ಬಹುಮಾನವನ್ನು ಸ್ನೇಹ ಎಂ. ಮತ್ತು ತೃತೀಯ ಬಹುಮಾನವನ್ನು ವರೀಷ್ಮಾ ಕೆ.ಎಸ್. ಅವರು ಪಡೆದುಕೊಂಡರು.
ವೇದಿಕೆಯಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ಕಡ್ಲೇರ ತುಳಸಿ ಮೋಹನ್ ಉಪಸ್ಥಿತರಿದ್ದರು. ನಿರ್ದೇಶಕರಾದ ಕೆ.ಟಿ. ಬೇಬಿ ಮ್ಯಾಥ್ಯು ಸ್ವಾಗತಿಸಿದರು, ಬಳಗದ ಪದಾಧಿಕಾರಿಗಳಾದ ಲತೀಫ್ ಮಾಸ್ಟರ್, ಬಿ.ಎನ್. ಮನು ಶೆಣೈ, ಟಿ.ಜಿ. ಪ್ರೇಂ ಕುಮಾರ್, ವಿಲ್ಫ್ರೆಡ್ ಕ್ರಾಸ್ತಾ, ಸುನೀತ ಪ್ರೀತು ಸನ್ಮಾನಿತರನ್ನು ಪರಿಚಯಿಸಿದರು. ಉಪಾಧ್ಯಕ್ಷರಾದ ಎಂ.ಇ. ಮೊಯಿದ್ದೀನ್ ವಂದಿಸಿದರು.