ಕೊಡಗಿನಲ್ಲಿ ಡಿ.1 ರಿಂದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ

30/11/2020

ಮಡಿಕೇರಿ, ನ 30: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಡಿ.1 ರಿಂದ ಡಿ.31 ರವರೆಗೆ ‘ಸಕ್ರಿಯ ಕ್ಷಯ ರೋಗ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸಾ ಆಂದೋಲನ’ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಎನ್. ಆನಂದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.1 ರಿಂದ 10ರವರೆಗೆ ಗೋಣಿಕೊಪ್ಪಲು ಕ್ಷಯರೋಗ ಚಿಕಿತ್ಸಾ ಘಟಕದ ಮುಖೇನ ವಿರಾಜಪೇಟೆ ತಾಲ್ಲೂಕಿನಲ್ಲಿ ಕ್ಷಯ ರೋಗ ಪತ್ತೆ ಸಮೀಕ್ಷೆ ನಡೆಯಲಿದ್ದು, ಕುಶಾಲನಗರದ ಕ್ಷಯ ರೋಗ ಚಿಕಿತ್ಸಾ ಘಟಕದ ಮೂಲಕ ಸೋಮವಾರಪೇಟೆ ತಾಲ್ಲೂಕಿನಲ್ಲಿ ಡಿ.11 ರಿಂದ 20 ರವರೆಗೆ ಹಾಗೂ ಮಡಿಕೇರಿ ಕ್ಷಯರೋಗ ಚಿಕಿತ್ಸಾ ಘಟಕದ ಮುಖಾಂತರ ಮಡಿಕೇರಿ ತಾಲ್ಲೂಕಿನಲ್ಲಿ ಡಿ.21 ರಿಂದ 31 ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.

ಕೊಡಗು ಜಿಲ್ಲೆಯಲ್ಲಿ ರಾಜ್ಯ ಕ್ಷಯರೋಗದ ಮಾರ್ಗಸೂಚಿಯನ್ವಯ ಶೇ.15 ರಿಂದ 20ರಷ್ಟು ಜನ ಸಂಖ್ಯೆಯನ್ನು ದುರ್ಬಲ, ಗಂಡಾಂತರಕಾರಿ ಹಾಗೂ ಹಿಂದುಳಿದ ಪ್ರದೇಶ ಮತ್ತು ಉದ್ದೇಶಿತ ಜನಸಂಖ್ಯೆಯೆಂದು ಗುರುತಿಸಿದ್ದು, ಸುಮಾರು 1,38,340 ಜನರಿಗೆ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆಯೆಂದು ತಿಳಿಸಿದರು.

ಮಡಿಕೇರಿ ತಾಲೂಕಿನ 10,455 ಮನೆಗಳ 39,913 ಜನರನ್ನು ಸಮೀಕ್ಷೆ ಮಾಡಲು 67 ತಂಡವನ್ನು ರಚಿಸಲಾಗಿದ್ದು, ವಿರಾಜಪೇಟೆ ತಾಲ್ಲೂಕಿನ 11,646 ಮನೆಯ 44,267 ಜನರನ್ನು ಸಮೀಕ್ಷೆ ಮಾಡಲು 69 ತಂಡಗಳನ್ನು ಮತ್ತು ಸೋಮವಾರಪೇಟೆ ತಾಲೂಕಿನ 12,233 ಮನೆಯ 54,160 ಜನರನ್ನು ಸಮೀಕ್ಷೆ ಮಾಡಲು 94 ತಂಡಗಳನ್ನು ರಚಿಸಿ ಸಮೀಕ್ಷಾ ಕಾರ್ಯ ನಡೆಸಲಾಗುವುದು. ಒಟ್ಟಾಗಿ ಜಿಲ್ಲೆಯ 34,337 ಮನೆಗಳನ್ನು ಸಮೀಕ್ಷೆ ಮಾಡಲು 230 ತಂಡ ರಚಿಸಿ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಈ ಅವಧಿಯಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡವು ಮನೆ ಮನೆಗೆ ಭೇಟಿ ನೀಡಿ ಕ್ಷಯರೋಗದ ಲಕ್ಷಣ, ಚಿಕಿತ್ಸೆ ಇವುಗಳ ಬಗ್ಗೆ ಸಮಾಲೋಚನೆ ನಡೆಸಿ ಕ್ಷಯರೋಗದ ಲಕ್ಷಣಗಳಿರುವ ಶಂಕಿತ ರೋಗಿಗಳ ಕಫದ ಮಾದರಿಗಳನ್ನು ಸ್ಥಳದಲ್ಲಿಯೇ ಸಂಗ್ರಹಿಸಿ ಜಿಲ್ಲೆಯ ಕುಶಾಲನಗರ, ವಿರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ಅಳವಡಿಸಿರುವ ಟ್ರೂನ್ಯಾಟ್ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿರುವ ಸಿ.ಬಿ ನ್ಯಾಟ್ ಕೇಂದ್ರಕ್ಕೆ ಕಫವನ್ನು ಪರೀಕ್ಷೆ ನಡೆಸಲು ಕಳುಹಿಸಲಾಗುವುದು. ರೋಗ ದೃಡ ಪಟ್ಟಲ್ಲಿ ಕ್ಷಯರೋಗದ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದೆಂದು ತಿಳಿಸಿದರು.

ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆ, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮಡಿಕೆÉೀರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಷಯ ರೋಗ ಪತ್ತೆಯ ಅತ್ಯಾಧುನಿಕ ಟ್ರೂ ನ್ಯಾಟ್ ಯಂತ್ರಗಳನ್ನು ಅಳವಡಿಸಿದ್ದು, ಈ ಕೇಂದ್ರಗಳು ನ. 25 ರಿಂದ ಕಾರ್ಯಾರಂಭ ಮಾಡಿರುವುದಾಗಿ ತಿಳಿಸಿ, ಕ್ಷಯ ರೋಗವನ್ನು 2025 ರ ಒಳಗಾಗಿ ಭಾರತದಿಂದ ನಿರ್ಮೂಲನ ಮಾಡುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವಂತೆ ಮನವಿ ಮಾಡಿದರು.