ಡಿ.26 ರಿಂದ ಶ್ರೀ ಓಂಕಾರೇಶ್ವರ ದೇಗುಲದಲ್ಲಿ ‘ಅಷ್ಟಬಂಧ ಬ್ರಹ್ಮ ಕಲಶೋತ್ಸವ’

30/11/2020

ಮಡಿಕೇರ ನ. 30 : ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇಗುಲದ ‘ಅಷ್ಟಬಂಧ ಬ್ರಹ್ಮ ಕಲಶೋತ್ಸವ’ವನ್ನು ಡಿ.26 ರಿಂದ 31 ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಬ್ರಹ್ಮಕಲಶ ಮುಂದೂಡಲ್ಪಟ್ಟಿತ್ತು. ಇದೀಗ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಅನುಮತಿಯೊಂದಿಗೆ ಬ್ರಹ್ಮಕಲಶವನ್ನು ಆಯೋಜಿಸಲಾಗುತ್ತಿದ್ದು, ಇದಕ್ಕೆ ಅಂದಾಜು 20 ಲಕ್ಷ ರೂ. ವೆಚ್ಚ ತಗುಲುವ ಸಾಧ್ಯತೆಗಳಿದೆ. ಈ ಹಿಂದೆ 1994 ರಲ್ಲಿ ನಡೆದಿದ್ದ ಅಷ್ಟಬಂಧ ಬ್ರಹ್ಮಕಲಶೋತ್ಸವ 26 ವರ್ಷಗಳ ಬಳಿಕ ಮತ್ತೆ ಕ್ಷೇತ್ರದ ತಂತ್ರಿಗಳಾದ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.

ಡಿ.26 ರಂದು ಸಂಜೆ 5ಕ್ಕೆ ತಂತ್ರಿಗಳ ಆಗಮನ, ಸ್ವಾಗತ, 7 ರಿಂದ ಪ್ರಾರ್ಥನೆ, ಮಹಾಸಂಕಲ್ಪ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕೋಘ್ನ ಹೋಮ, ವಾಸ್ತು ಬಲಿ, ಅಂಕುರಾರ್ಪಣೆ ನಡೆಯಲಿದ್ದು, ಡಿ.27 ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬ ಶುದ್ದಿ, ಕಲಶ ಪೂಜೆ (ಚತುಃ ಶುದ್ದಿ, ಪಂಚಕ ಧಾರೆ), ಬಿಂಬ ಶುದ್ಧಿ, ಕಲಶಾಭಿಷೇಕ, ಅಂಕುರ ಪೂಜೆ, ಪೆÇ್ರೀಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಹೋಮ ಕಲಶಾಭಿಷೇಕ, ಮಧ್ಯಾಹ್ನ 1 ಕ್ಕೆ ಪೂಜೆ, ರಾತ್ರಿ ದುರ್ಗಾ ನಮಸ್ಕಾರ ಪೂಜೆ, ಅಂಕುರ ಪೂಜೆ ನಡೆಯಲಿದೆ ಎಂದರು.

ಡಿ.28 ರಂದು ಬೆಳಿಗ್ಗೆ 6 ರಿಂದ ಗಣಪತಿ ಹೋಮ, ಅಂಕುರಪೂಜೆ, ಚೋರಶಾಂತಿ, ಸ್ವ ಶಾಂತಿ, ಅದ್ಭುತ ಶಾಂತಿ ಹೋಮಗಳು, ಕಲಶಾಭಿಷೇಕ, ಮಧ್ಯಾಹ್ನ ಪೂಜೆ ನಡೆಯಲಿದ್ದು, ರಾತ್ರಿ 7 ಗಂಟೆಗೆ ಅಂಕುರ ಪೂಜೆ, ದುರ್ಗಾನಮಸ್ಕಾರ ಪೂಜೆ, ಬ್ರಹ್ಮ ಕಲಶ ಮಂಟಪ ಸಂಸ್ಕಾರ ನಡೆಯಲಿದೆ.

ಡಿ.29ರ ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ ಹಾಗೂ ಮಧ್ಯಾಹ್ನ ಪೂಜೆ ನಂತರ ರಾತ್ರಿ ಅಂಕುರ ಪೂಜೆ, ಭಾಗವತೀ ಸೇವೆ ನಡೆಯಲಿದೆ. ಡಿ.30 ರಂದು ಬೆಳಿಗ್ಗೆ ಅಂಕುರ ಪೂಜೆ, ಗಣಪತಿ ಹೋಮ, 8 ರಿಂದ ರುದ್ರಹೋಮ ಸಂಕಲ್ಪ, 11.30ಕ್ಕೆ ರುದ್ರಹೋಮ ಪೂರ್ಣಾಹುತಿ, ಅನುಜ್ಞಾಕಲಶ ಪೂಜೆ, ಅನುಜ್ಞಾ ಕಲಶಾಭಿಷೇಕ, ಪರಿವಾರ ಪ್ರಾರ್ಥನೆ, ಮಧ್ಯಾಹ್ನ ಪೂಜೆ ನಂತರ ರಾತ್ರಿ ಕುಂಬೇಷ ಕರ್ಕರಿ ಕಲಶ ಪೂಜೆ, ಆದಿವಾಸ ಹೋಮ, ಪರಿಕಲಶ ಹೋಮ, ಬ್ರಹ್ಮಕಲಶ ಪೂಜೆ ಹಾಗೂ ಕಲಶಾಧಿವಾಸ ನಡೆಯಲಿದೆ.

ಡಿ.31 ರಂದು ಬೆಳಿಗ್ಗೆ 6 ರಿಂದ ಗಣಪತಿ ಹೋಮ, 9.12ರ ಸಲ್ಲುವ ಪುನರ್ವಸು ನಕ್ಷತ್ರ, ಮಕರ ಲಗ್ನದಲ್ಲಿ ಅಪ್ತಬಂಧ ಲೇಪನ, ಪರಿಕಲಶಾಭಿಷೇಕ, ಬೆಳಿಗ್ಗೆ 11.32ರ ಮೀನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, 12.30ಕ್ಕೆ ಮಹಾಪೂಜೆ ನಂತರ ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ನೀಡುವವರು ಮಡಿಕೇರಿಯ ಬ್ಯಾಂಕ್ ಆಫ್ ಬರೋಡಾದ ಉಳಿತಾಯ ಖಾತೆ ಸಂಖ್ಯೆ 64210100008355, ಐಎಫ್‍ಎಸ್‍ಸಿ ಕೋಡ್: ಃಂಖಃಔಗಿಎಒಂಆI ಗೆ ಅಥವಾ ದೇವಾಲಯದ ಕಛೇರಿ ಕೆಲಸದ ಸಮಯದಲ್ಲಿ ಹಣ ಪಾವತಿಸಿ ಅಧಿಕೃತ ರಶೀದಿ ಪಡೆದುಕೊಳ್ಳುವಂತೆ ಮನವಿ ಮಾಡಿದರು. ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಸದಸ್ಯರಾದ ಟಿ.ಹೆಚ್. ಉದಯ ಕುಮಾರ್, ಪ್ರಕಾಶ್ ಆಚಾರ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ ಉಪಸ್ಥಿತರಿದ್ದರು.