ಗ್ರಾ.ಪಂ. ಚುನಾವಣೆ ವೇಳಾಪಟ್ಟಿ ಪ್ರಕಟ : ಕೊಡಗಿನ 101 ಗ್ರಾ.ಪಂ ಗಳಿಗೆ ಎರಡು ಹಂತದಲ್ಲಿ ಚುನಾವಣೆ

30/11/2020

ಮಡಿಕೇರಿ ನ.30 : ಕೊಡಗು ಜಿಲ್ಲೆಯ 101 ಗ್ರಾಮ ಪಂಚಾಯತ್‍ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಅದರಂತೆ ಸೋಮವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಮೊದಲ ಹಂತದಲ್ಲಿ ಮಡಿಕೇರಿ ತಾಲೂಕಿನ 26 ಹಾಗೂ ಸೋಮವಾರಪೇಟೆ ತಾಲೂಕಿ 40 ಗ್ರಾಮ ಪಂಚಾಯಿತಿಗಳಿಗೆ ಹಾಗೂ ಎರಡನೇ ಹಂತದಲ್ಲಿ ಸೋಮವಾರಪೇಟೆ ತಾಲೂಕಿನ 35 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ.ರಂಜಿತಾ ಅವರು ತಿಳಿಸಿದ್ದಾರೆ.
ಮೊದಲೇ ಹಂತದ ಚುನಾವಣೆಗೆ ಸಂಬಂಧಿಸಿದಂತೆ ಡಿ.7 ಹಾಗೂ ಎರಡನೇ ಹಂತದ ಚುನಾವಣೆಗೆ ಸಂಬಂಧಿಸಿ ಡಿ.11ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ.
ಮೊದಲ ಹಂತದ ಚುನಾವಣೆ ನಡೆಯುವ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕುಗಳಲ್ಲಿ ನಾಮಪತ್ರಗಳನ್ನು ಸಲ್ಲಿಸಲು ಡಿ.11 ಕೊನೆಯ ದಿನವಾಗಿದ್ದು, ಡಿ.12ರಂದು ನಾಮಪತ್ರಗಳ ಪರಿಶೀಲನೆ, ಡಿ.14ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮತದಾನ ಅಗತ್ಯವಿದ್ದರೆ ಡಿ.22ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ದ್ವಿತೀಯ ಹಂತದ ಚುನಾವಣೆ ನಡೆಯುವ ವೀರಾಜಪೇಟೆ ತಾಲೂಕಿನಲ್ಲಿ ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನವಾಗಿದ್ದು, ಡಿ.17ರಂದು ನಾಮಪತ್ರಗಳ ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯಲು ಡಿ.19 ಕೊನೆಯ ದಿನವಾಗಿದ್ದು, ಡಿ.27ರಂದು ಮತದಾನ ನಡೆಯಲಿದೆ. ಎರಡೂ ಹಂತದ ಚುನಾವಣೆಯ ಬಳಿಕ ಮತಗಳ ಎಣಿಕೆಯು ಡಿ.30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.
ಕೋವಿಡ್-19ರ ಹಿನ್ನೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಮಾರ್ಗಸೂಚಿಯನ್ನು ತಯಾರಿಸಿದ್ದು, ಅದರಲ್ಲಿರುವ ಸೂಚನೆಗಳನ್ನು ಅಳವಡಿಸಿಕೊಂಡು ಚುನಾವಣೆ ನಡೆಸಬೇಕು. ಪ್ರತೀ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ 1000ಕ್ಕೆ ಮಿತಿಗೊಳಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸುವ ಮುನ್ನ ತಮ್ಮ ಕೈಗಳನ್ನು ಸ್ಯಾನಿಟೈಝ್ ಮಾಡಿಕೊಂಡು ಮತ ಚಲಾಯಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರು ಅಗತ್ಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಸಂಬಂಧಿಸಿದ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತದಾನ ಮಾಡಬಹುದಾಗಿದೆ.
ರಾಜ್ಯದ ಬೀದರ್ ಜಿಲ್ಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ಹಾಗೂ ಉಳಿದ ಜಿಲ್ಲೆಗಳಲ್ಲಿ ಮತಪೆಟ್ಟಿಗೆ ಮೂಲಕ ಚುನಾವಣೆ ನಡೆಯಲಿರುವುದಾಗಿ ರಂಜಿತಾ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ 101 ಗ್ರಾ.ಪಂ.ಗಳಿಗೆ 90 ಆಕ್ಸಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 562 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, 1,81, 443 ಪುರುಷರು ಹಾಗೂ 1,84, 565 ಮಹಿಳೆಯರು ಹಾಗೂ 5 ಮಂದಿ ಇತರರು ಸೇರಿದಂತೆ ಒಟ್ಟು 3,66,013 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ.