ವೀಡಿಯೊ ಸಂವಾದದ ಮೂಲಕ ಸಕಾಲ ಸಪ್ತಾಹಕ್ಕೆ ಚಾಲನೆ

30/11/2020

ಮಡಿಕೇರಿ ನ.30 : ಸಕಾಲ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕೃತವಾಗಿ ಬಾಕಿ ಉಳಿದಿರುವ ಅರ್ಜಿ ಮತ್ತು ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಹಾಗೂ ಸಾರ್ವಜನಿಕರಿಗೆ ಸಕಾಲ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಸಕಾಲ ಸಚಿವರಾದ ಸುರೇಶ್ ಕುಮಾರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅವರು ಸಕಾಲದ ಅನುಷ್ಠಾನದ ಬಗ್ಗೆ ಪರಿಶೀಲನೆ ಮಾಡಬೇಕು. ಸಕಾಲ ಸಪ್ತಾಹ ಕಾರ್ಯಕ್ರಮದಿಂದ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಲ್ಲಾ ಜಿಲ್ಲಾಧಿಕಾರಿಗಳು ಕೈಜೋಡಿಸಬೇಕು. ಪ್ರತಿಯೊಂದು ಇಲಾಖೆಯಲ್ಲೂ ಸಕಾಲ ಸಪ್ತಾಹದ ಬಗ್ಗೆ ಅರಿವು ಮೂಡಿಸಲು ಬ್ಯಾನರ್ ಅಳವಡಿಸಬೇಕು ಎಂದು ತಿಳಿಸಿದರು.
ಸಕಾಲ ಸಪ್ತಾಹ ಕಾರ್ಯಕ್ರಮವು ಮೊದಲ ಹಂತದಲ್ಲಿ ನವೆಂಬರ್, 30 ರಿಂದ ಡಿಸೆಂಬರ್ 5 ರವರೆಗೆ ನಗರಾಭಿವೃದ್ಧಿ, ಕಂದಾಯ, ಸಾರಿಗೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಲ್ಲಿ ನಡೆಯಲಿದೆ. 2 ನೇ ಹಂತದಲ್ಲಿ ಡಿ.7 ರಿಂದ ಡಿ.11 ರವರೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 3ನೇ ಹಂತದಲ್ಲಿ ಡಿಸೆಂಬರ್, 14 ರಿಂದ ಡಿಸೆಂಬರ್, 19 ರವರೆಗೆ ಉಳಿದ ಎಲ್ಲಾ ಇಲಾಖೆಗಳಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಸಕಾಲ ಮಿಷನ್ ಅಪರ ನಿರ್ದೇಶಕರಾದ ಡಾ.ಬಿ.ಆರ್.ಮಮತಾ, ಇತರರು ಇದ್ದರು, ವಿಡಿಯೊ ಮೂಲಕ ಉದ್ಘಾಟನೆಗೊಂಡ ಸಕಾಲ ಸಪ್ತಾಹದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶ್ರೀನಿವಾಸ ಇತರರು ಪಾಲ್ಗೊಂಡಿದ್ದರು.