ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಕಾರ್ತಿಕ ಮಾಸದ ತೆಪ್ಪೋತ್ಸವ

01/12/2020

ಮಡಿಕೇರಿ ಡಿ. 1 : ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಹುತ್ತರಿ ಹಬ್ಬ ಮತ್ತು ಕಾರ್ತಿಕ ಹುಣ್ಣಿಮೆ ಅಂಗವಾಗಿ ಶ್ರದ್ಧಾಭಕ್ತಿಯಿಂದ ತೆಪ್ಪೋತ್ಸವ ನಡೆಯಿತು.

ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಪುಷ್ಪಾಲಂಕೃತ ತೆಪ್ಪದ ಮೇಲೆ ಬೆಳ್ಳಿ ಮೂರ್ತಿಯನ್ನು ಕೂರಿಸಿ ತೆಪ್ಪೋತ್ಸವ ಮಾಡಲಾಯಿತು. ಇದಕ್ಕೂ ಮೊದಲು ದೇವಾಲಯದಲ್ಲಿ ವಿವಿಧ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಯಿತು. ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಆವರಣದಲ್ಲೇ ಉತ್ಸವ ಮಾಡಲಾಯಿತು. ನಂತರ ಅದೇ ಪಲ್ಲಕ್ಕಿಯಲ್ಲಿ ಈಶ್ವರನ್ನು ಕರೆತಂದು ತೆಪ್ಪದಲ್ಲಿ ಕೂರಿಸಿ ಕಲ್ಯಾಣಿಯಲ್ಲಿ ಉತ್ಸವ ಮಾಡಲಾಯಿತು. ಬೃಹತ್ ಕಲ್ಯಾಣಿಯಲ್ಲಿ ಮೂರು ಸುತ್ತು ತೆಪ್ಪೋತ್ಸವ ಮಾಡಲಾಯಿತು.

ವರ್ಷಕ್ಕೊಮ್ಮೆ ನಡೆಯುವ ಈ ತೆಪ್ಪೋತ್ಸವಕ್ಕೆ ನೂರಾರು ಭಕ್ತರು ಆಗಮಿಸಿ ತೆಪ್ಪೋತ್ಸವವವನ್ನು ಕಣ್ತುಂಬಿಕೊಂಡರು. ತೆಪ್ಪೋತ್ಸವದ ಅಂಗವಾಗಿ ದೇವಾಲಯದ ಆವರಣ ಮತ್ತು ಕಲ್ಯಾಣಿ ಸುತ್ತಲೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ತೆಪ್ಪೋತ್ಸವದ ಬಳಿಕ ದೇವಾಲಯದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹುತ್ತರಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಬಳಿಕ ದೇವಾಲಯಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಕದಿರು ವಿತರಣೆ ಮಾಡಲಾಯಿತು.