ಸ್ನಾನಕ್ಕೆಂದು ತೆರಳಿದ ಯುವಕ ನೀರು ಪಾಲು : ತೋಮರ ಗ್ರಾಮದಲ್ಲಿ ಘಟನೆ

01/12/2020

ಮಡಿಕೇರಿ ಡಿ.1 : ಸ್ನಾನಕ್ಕೆಂದು ಕೆರೆಗೆ ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೋಮರ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕು ಕೆದಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದ ಕೊರ್ತಿಕಾಡು ನಿವಾಸಿ ಸೋಮಯ್ಯ ಎಂಬವರ ಪುತ್ರ ಲೋಕೇಶ್(18) ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಸ್ನಾನಕ್ಕೆಂದು ಹೋದ ಯುವಕ ಕತ್ತಲಾದರೂ ಮನೆಗೆ ಮರಳಿ ಬರಲಿಲ್ಲ ಎಂದು ಮನೆ ಮಂದಿ ಕೆರೆಯ ಬಳಿ ಆಗಮಿಸಿ ಪರಿಶೀಲಿಸಿದಾಗ ಆತ ತೊಟ್ಟಿದ್ದ ಬಟ್ಟೆ ಕೆರೆ ದಂಡೆಯ ಮೇಲೆ ಕಂಡು ಬಂದಿದೆ. ಬಳಿಕ ಸಂಶಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಕತ್ತಲಾಗಿದ್ದ ಹಿನ್ನಲೆಯಲ್ಲಿ ಕೆರೆಯಲ್ಲಿ ಹುಡುಕಾಟ ನಡೆಸಿರಲಿಲ್ಲ.
ಮಂಗಳವಾರ ಬೆಳಗ್ಗೆ ಪೊಲೀಸರು ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಕೆರೆಯಲ್ಲಿ ಮುಳುಗಿದ್ದ ಯುವಕನ ಮೃತ ದೇಹ ಹೊರ ತೆಗೆದಿದ್ದಾರೆ. ಘಟನೆಗೆ ಸಂಬಂದಿಸಿದಂತೆ ಮೃತನ ತಂದೆ ಸೋಮಯ್ಯ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.