ಕುಶಾಲನಗರದಲ್ಲಿ ಘಟನೆ : ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಬಂಧಿತ ಆರೋಪಿ ಪರಾರಿ :

01/12/2020

ಮಡಿಕೇರಿ ಡಿ.1 : ಬೀಟೆ ಮರದ ನಾಟಾಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸಂದರ್ಭ ಬಂಧಿಸಲ್ಪಟ್ಟಿದ್ದ ಆರೋಪಿಯೊಬ್ಬ ಕೋವಿಡ್ ಪರೀಕ್ಷೆ ನಡೆಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಶಿವಜ್ಯೋತಿ ನಗರ ನಿವಾಸಿ ಅಬ್ರಾಹರ್ ಎಂಬವರ ಪುತ್ರ ಜುನೈದ್ ಪಾಷಾ(24) ಎಂಬಾತನೇ ಕಾಲ್ಕಿತ್ತವನು. ಆರೋಪಿಯ ಬಂಧನಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಬಲೆ ಬೀಸಿದ್ದಾರೆ.
ಕುಶಾಲನಗರ ಅರಣ್ಯ ವಲಯದ ಮೀನುಕೊಲ್ಲಿ ವ್ಯಾಪ್ತಿಯ ವಾಲ್ನೂರು- ತ್ಯಾಗತ್ತೂರಿನ ಖಾಸಗಿ ಕಾಫಿ ತೋಟವೊಂದರಿಂದ ಬೀಟೆ ಮರಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿರುವ ಬಗ್ಗೆ ಕುಶಾಲನಗರದ ಅರಣ್ಯ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪ ಅರಣ್ಯ ಅಧಿಕಾರಿ ಸುಬ್ರಾಯ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಜುನೈದ್ ಪಾಷಾ ಎಂಬಾತನನ್ನು ಬಂಧಿಸಿದ್ದರು. ಮಾತ್ರವಲ್ಲದೇ, ಬೀಟೆ ಮರ ಸಾಗಾಟ ಮಾಡುವ ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ(ಕೆಎ.45.ಎ.2689) ಹಾಗೂ ಬೀಟೆ ಮರದ 9 ನಾಟಗಳನ್ನು ವಶಪಡಿಸಿಕೊಂಡಿದ್ದರು.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಮುನ್ನ ಕೋವಿಡ್ ಪರೀಕ್ಷೆಗಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಈ ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಆಲ್ಬರ್ಟ್ ಡಿಸೋಜ ಮತ್ತು ದುರ್ಗೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ ಜುನೈದ್ ಪಾಷಾ, ಆಸ್ಪತ್ರೆಯ ಮೊದಲನೆ ಮಹಡಿಯಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ. ತಕ್ಷಣವೇ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬೆನ್ನಟ್ಟಿದರೂ ಪ್ರಯೋಜನವಾಗಿಲ್ಲ.
ಕರ್ತವ್ಯನಿರತ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಜುನೈದ ಪಾಷಾ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ತಿಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.