ಕೊಡಗಿನ ವಿವಿಧೆಡೆ ಪುತ್ತರಿ ಹಬ್ಬದ ಸಡಗರ : ಶ್ರೀಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ

01/12/2020

ಮಡಿಕೇರಿ ಡಿ.1 : ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಧಾನ್ಯಲಕ್ಷ್ಮಿಯನ್ನು ಬರ ಮಾಡಿಕೊಳ್ಳುವ ಪುತ್ತರಿಯನ್ನು ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು.
ಮಡಿಕೇರಿಯ ಶ್ರೀಓಂಕಾರೇಶ್ವರ ದೇವಾಲಯದ ಆವರಣದ ಭತ್ತದ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕದಿರನ್ನು ದೇವಾಲಯಕ್ಕೆ ತಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ಫಸಲಿಗೆ ನಮಿಸಲಾಯಿತು. ನಂತರ ಭಕ್ತಾಧಿಗಳಿಗೆ ಕದಿರನ್ನು ವಿತರಿಸಲಾಯಿತು. ಇದಕ್ಕೂ ಮೊದಲು ದೇವಾಲಯದ ಕೆರೆಯಲ್ಲಿ ನಡೆದ ತೆಪ್ಪೋತ್ಸವಕ್ಕೆ ಭಕ್ತರು ಸಾಕ್ಷಿಯಾದರು. ಮಹಾಪೂಜೆಯ ನಂತರ ಪುತ್ತರಿಯ ವಿಶೇಷವಾದ ತಂಬಿಟ್ಟನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ನೀಡಲಾಯಿತು.
ನಗರದ ಕೊಡವ ಸಮಾಜ ಮತ್ತು ಗೌಡ ಸಮಾಜದಲ್ಲೂ ಕದಿರು ಹಂಚುವ ಮೂಲಕ ಪುತ್ತರಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯ, ಬಾಡಗರಕೇರಿಯ ಶ್ರೀಮೃತ್ಯುಂಜಯ ದೇವಾಲಯ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಪುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.