ಪ್ರತಿ ಗ್ರಾ.ಪಂ ಗೆ 1.5 ಕೋಟಿ ರೂ.ಅನುದಾನ

02/12/2020

ರಾಮನಗರ ಡಿ.2 : ಆಡಳಿತ ವಿಕೇಂದ್ರೀಕರಣವನ್ನು ಮತ್ತಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಗೂ ವರ್ಷಕ್ಕೆ 1.5 ಕೋಟಿ ರೂ.ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದ ವರದಿಯಲ್ಲಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೇ ಹೆಚ್ಚು ಅನುದಾನ ನೀಡುವ ಅಂಶಗಳಿವೆ. ಅದರಂತೆ, ಗ್ರಾಮೀಣಾ ಭಿವೃದ್ಧಿಗೆ ಬೇಕಾದ ಎಲ್ಲ ಹಣಕಾಸು ಒದಗಿಸಲಾಗುವುದು. ಜತೆಗೆ, ಆಯಾ ಗ್ರಾಮಗಳ ನರೇಗಾ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ನಮ್ಮ ಪಕ್ಷದ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಂತೆ ಆದರ್ಶ ಗ್ರಾಮಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಆರೋಗ್ಯ, ಮೂಲಸೌಕರ್ಯ, ಶಿಕ್ಷಣ, ರಸ್ತೆ, ಕೆರೆಕುಂಟೆ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಕೇವಲ ಆರು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ವ್ಯವಸ್ಥೆ ಶೇ.30ರಷ್ಟು ಮಾತ್ರ ಇತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಶೌಚಾಲಯ ಕಟ್ಟುವುದೂ ಅಸಾಧ್ಯ ಎನ್ನುವಂಥ ಸ್ಥಿತಿ ಇತ್ತು. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್‍ಅಭಿಯಾನದಿಂದ ಇವತ್ತು ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ಕಾಣಬಹುದು. ಸ್ವಚ್ಛತೆ ಎನ್ನುವುದು ಜನಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಎಲ್ಲೆಲ್ಲೂ ಕಾಣಬಹುದು ಎಂದರು.