ತಾಲ್ಲೂಕು ಉದ್ಘಾಟನೆ ಸಂದರ್ಭ ಹೋರಾಟಗಾರರ ಕಡೆಗಣನೆ : ಎಂಎಲ್‍ಸಿ ವೀಣಾಅಚ್ಚಯ್ಯ ಆರೋಪ

December 2, 2020

ಮಡಿಕೇರಿ ಡಿ.2 : ನೂತನ ಪೊನ್ನಂಪೇಟೆ ತಾಲ್ಲೂಕು ಉದ್ಘಾಟನಾ ಸಮಾರಂಭದ ಸಂದರ್ಭ ಪ್ರತ್ಯೇಕ ತಾಲ್ಲೂಕಿಗಾಗಿ ಹೋರಾಟ ನಡೆಸಿದ ಹೋರಾಟಗಾರರು ಹಾಗೂ ಹಿರಿಯ ನಾಗರೀಕರನ್ನು ಕಡೆಗಣಿಸುವ ಮೂಲಕ ಬಿಜೆಪಿ ಸರ್ಕಾರದ ಆಡಳಿತ ವ್ಯವಸ್ಥೆ ಹಿಟ್ಲರ್ ಸಂಸ್ಕøತಿಯನ್ನು ಪ್ರದರ್ಶಿಸಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೊನ್ನಂಪೇಟೆ ತಾಲ್ಲೂಕಿಗಾಗಿ ಹಿರಿಯ ನಾಗರೀಕ ವೇದಿಕೆ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರ ನೇತೃತ್ವದಲ್ಲಿ ನಿರಂತರ 74 ದಿನಗಳ ಧರಣಿ ಸತ್ಯಾಗ್ರಹದ ಹೋರಾಟ ನಡೆದಿದೆ. ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಪದ್ಮಿನಿ ಪೊನ್ನಪ್ಪ ಅವರ ಪ್ರಯತ್ನವೂ ಇದೆ. ಆದರೆ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಹೋರಾಟ ನಡೆಸಿದವರಿಗೆ ಯಾರಿಗೂ ಸ್ಥಾನ ಕಲ್ಪಿಸದೆ ತಮ್ಮಿಂದಲೇ ಎಲ್ಲವೂ ಆಗಿದೆ ಎಂದು ಪ್ರತಿಬಿಂಬಿಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಂದಿ ಮಾಡಿರುವುದಾಗಿ ಟೀಕಿಸಿದರು.
ಕನಿಷ್ಠ ಹಿರಿಯ ನಾಗರೀಕರನ್ನಾದರೂ ವೇದಿಕೆಗೆ ಕರೆದು ಸನ್ಮಾನಿಸುವ ಸೌಜನ್ಯವನ್ನಾದರೂ ತೋರಬಹುದಿತ್ತು. ಆದರೆ ಹಿರಿಯರಿಗೂ ಗೌರವ ನೀಡದ ಸಂಸ್ಕøತಿಯನ್ನು ಬಿಜೆಪಿ ಪ್ರದರ್ಶಿಸಿದೆ. ಅಲ್ಲದೆ ಸ್ಥಳದಲ್ಲಿದ್ದ ಜಿ.ಪಂ ಹಾಗೂ ತಾ.ಪಂ ಸದಸ್ಯರಿಗೂ ಆಸನದ ವ್ಯವಸ್ಥೆಯನ್ನು ಮಾಡದೆ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ನಾಗರೀಕರೇ ಉತ್ಸಾಹದಿಂದ ಸುಮಾರು 3 ಲಕ್ಷ ರೂ. ಖರ್ಚು ಮಾಡಿ ನೆನಪಿನ ಕಾಣಿಕೆ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಆದರೆ ಕೃತಜ್ಞತಾ ಮನೋಭಾವನೆ ಇಲ್ಲದ ಆಡಳಿತ ವ್ಯವಸ್ಥೆ ಹಿರಿಯರನ್ನು ಕಡೆಗಣಿಸಿತು. ಕೊಡಗಿನಲ್ಲಿ ಬಿಜೆಪಿ ಇಲ್ಲದೆ ಉಸಿರಾಡಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ಬಿಜೆಪಿ ಮಂದಿ ವರ್ತಿಸುತ್ತಿದ್ದಾರೆ. ಹಿಂದೆ ನಾವೂ ಕೂಡ ಸರ್ಕಾರ ನಡೆಸಿದ್ದೇವೆ, ಎಲ್ಲರಿಗೂ ಅಗತ್ಯ ಗೌರವವನ್ನು ನೀಡಿದ್ದೇವೆ. ಆದರೆ ಬಿಜೆಪಿಯ ಹಿಟ್ಲರ್ ಆಡಳಿತದಲ್ಲಿ ಯಾರಿಗೂ ಗೌರವ ಇಲ್ಲದಾಗಿದೆ. ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ನನಗೂ ಮಾತನಾಡಲು ಅವಕಾಶ ನೀಡಲಿಲ್ಲ್ಲ, ಈ ರೀತಿಯ ಅನುಭವ ಅನೇಕ ಬಾರಿ ನನಗೆ ಆಗಿದೆ ಎಂದು ವೀಣಾಅಚ್ಚಯ್ಯ ಬೇಸರ ವ್ಯಕ್ತಪಡಿಸಿದರು.
ಮುಂದೆ ನೂತನ ಕುಶಾಲನಗರ ತಾಲ್ಲೂಕು ಉದ್ಘಾಟನೆ ಸಂದರ್ಭ ಹೋರಾಟಗಾರರನ್ನು ಗೌರವಿಸದಿದ್ದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿದ್ದಾಗಲೇ ಪ್ರತ್ಯೇಕ ತಾಲ್ಲೂಕಿಗಾಗಿ ಬೇಡಿಕೆ ಇಡಲಾಗಿತ್ತು. ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೇಡಿಕೆಗೆ ಮತ್ತಷ್ಟು ಪುಷ್ಟಿ ದೊರೆತು ಪದ್ಮಿನಿ ಪೊನ್ನಪ್ಪ ಅವರು ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನೂತನ ತಾಲ್ಲೂಕು ಘೋಷಣೆಗೆ ಸಹಕರಿಸಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಅವರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಏನೂ ಮಾಡದ ಬಿಜೆಪಿ ಮಂದಿ ಮಾತ್ರ ಎಲ್ಲವೂ ನಮ್ಮಿಂದಲೇ ಎನ್ನುವ ರೀತಿ ವರ್ತಿಸಿದ್ದಾರೆ ಎಂದು ವೀಣಾಅಚ್ಚಯ್ಯ ಟೀಕಿಸಿದರು.
::: ಪ್ರಚಾರ ಪ್ರಿಯ ಬಿಜೆಪಿ :::
ಬಿಜೆಪಿ ಕೇವಲ ಪ್ರಚಾರಕ್ಕಷ್ಟೇ ಹವಣಿಸುತ್ತದೆ, ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬಿಜೆಪಿ ಸಭೆಯೊಂದನ್ನು ಆಯೋಜಿಸಿತ್ತು. ಆದರೆ ಪಕ್ಷದ ಧ್ವಜವನ್ನು ತಾಲ್ಲೂಕು ಕಚೇರಿ ವ್ಯಾಪ್ತಿಯಲ್ಲೂ ಹಾರಿಸಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದ ವೀಣಾಅಚ್ಚಯ್ಯ, ಕೊಡಗಿನ ಜನ ಈ ರೀತಿಯ ವರ್ತನೆಗಳನ್ನು ಹೆಚ್ಚು ದಿನ ಸಹಿಸಿಕೊಳ್ಳುವುದಿಲ್ಲವೆಂದರು. ಮುಂದಿನ ದಿನಗಳಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
::: ಸಚಿವರಿಂದ ಸುಳ್ಳಿನ ಕಂತೆ :::
ಕಂದಾಯ ಸಚಿವರು ವೃದ್ಧಾಪ್ಯ ವೇತನವನ್ನು ಮನೆ ಬಾಗಿಲಿಗೆ ತಲುಪಿಸುವ ಭರವಸೆ ನೀಡಿದ್ದಾರೆ. ಆದರೆ ಇದು ಸುಳ್ಳಿನ ಕಂತೆಯಾಗಿದ್ದು, ನೌಕರರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲವೆಂದು ಟೀಕಿಸಿದರು. ಮನೆ ಬಾಗಲಿಗೆ ವೃದ್ಧಾಪ್ಯ ವೇತನ ನೀಡುವ ಸಚಿವರು ಅರ್ಹ ಫಲಾನುಭವಿಗಳಿಗೆ ಹಣ ನೀಡದೆ ಸತಾಯಿಸುತ್ತಿರುವುದು ಯಾಕೆ ಎಂದು ವೀಣಾಅಚ್ಚಯ್ಯ ಪ್ರಶ್ನಿಸಿದರು. ಸಚಿವರುಗಳು ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ಮೊದಲೇ ಅರಿತುಕೊಂಡು ಜಿಲ್ಲೆಗೆ ಭೇಟಿ ನೀಡಬೇಕಾಗುತ್ತದೆ. ಅದು ಬಿಟ್ಟು ಸುಮ್ಮನೆ ಬಂದು ಹೋದರೆ ಏನು ಪ್ರಯೋಜನ, ಕೊಡಗಿನ ರಸ್ತೆಗಳ ದುಸ್ಥಿತಿಯ ಬಗ್ಗೆ ಸಚಿವರಿಗೆ ಅರಿವಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
::: ಮೋದಿ ಹೆಸರು ನೋಡಿ ಮತ ಹಾಕಿದರೆ ಅಭಿವೃದ್ಧಿ ಆಗಲ್ಲ :::
ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದೆ, ಈ ಚುನಾವಣೆಯಲ್ಲೂ ಪ್ರಧಾನಿ ಮೋದಿ ಹಾಗೂ ಹಿಂದುತ್ವದ ಆಧಾರದಲ್ಲಿ ಗ್ರಾಮಸ್ಥರು ಮತದಾನ ಮಾಡಿದರೆ ಗ್ರಾಮದ ಅಭಿವೃದ್ಧಿ ಸಾಧ್ಯವಿಲ್ಲ. ಪಕ್ಷ ಯಾವುದೇ ಆಗಿರಲಿ, ಆದರೆ ಊರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮತ್ತು ಜನಪರವಾಗಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ವೀಣಾಅಚ್ಚಯ್ಯ ಇದೇ ಸಂದರ್ಭ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಗ್ರಾ.ಪಂ ಚುನಾವಣೆಯನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಶೇ.85 ರಷ್ಟು ಪಂಚಾಯಿತಿಗಳಿಗೆ ತಾವು ಭೇಟಿ ನೀಡಿರುವುದಾಗಿ ತಿಳಿಸಿದರು.
::: ಶಾಸಕರು ವಿಫಲ :::
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ ಮಾತನಾಡಿ ಅತಿವೃಷ್ಟಿ, ವನ್ಯಜೀವಿಗಳ ದಾಳಿ ಮತ್ತು ಕೋವಿಡ್ ಸಂದಿಗ್ಧ ಪರಿಸ್ಥಿಯಿಂದಾಗಿ ಕೊಡಗಿನ ಬೆಳೆಗಾರರು ಹಾಗೂ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ ಇಲ್ಲಿಯ ದುಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆದು ಅಗತ್ಯ ನೆರವು ಪಡೆಯುವಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಂಸದರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನೀಡಿದ ವರದಿಯನ್ನೇ ಸತ್ಯವೆಂದು ತಿಳಿದು ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ದಕ್ಷಿಣ ಕೊಡಗು ಅತಿಮಳೆಯಿಂದ ಸಾಕಷ್ಟ ಹಾನಿಗೀಡಾಗಿದ್ದರೂ ಎಲ್ಲಾ ಗ್ರಾಮಗಳನ್ನು ಪರಿಹಾರದ ವ್ಯಾಪ್ತಿಗೆ ಒಳಪಡಿಸದೆ ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ದರವನ್ನು ಏರಿಸುವ ಮೂಲಕ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಬಂದಿದ್ದರೂ ಭತ್ತ ಖರೀದಿ ಕೇಂದ್ರವನ್ನು ತೆರೆಯದೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ತೋರಿದೆ. ಹಿಂದಿನ ಸರ್ಕಾರಗಳು ನವೆಂಬರ್ ತಿಂಗಳಿನಲ್ಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುತ್ತಿದ್ದವು. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಕಳೆದ ವರ್ಷ ಜನವರಿಯಲ್ಲಿ ಕೇಂದ್ರವನ್ನು ಆರಂಭಿಸಿತ್ತು. ಪ್ರಸ್ತುತ ವರ್ಷ ರೈತರು ಸಂಕಷ್ಟದಲ್ಲಿರುವುದರಿಂದ ಹಣವಿಲ್ಲದೆ ಭತ್ತವನ್ನು ಅತ್ಯಂತ ಕಡಿಮೆ ಬೆಲೆಗೆ ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಖರೀದಿ ಕೇಂದ್ರವನ್ನು ತಕ್ಷಣ ಆರಂಭಿಸದಿದ್ದಲ್ಲಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಟಾಟುಮೊಣ್ಣಪ್ಪ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸರಾಚಂಗಪ್ಪ ಹಾಗೂ ಪ್ರಮುಖರಾದ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು.

error: Content is protected !!