ಗ್ರಾ.ಪಂ ಚುನಾವಣೆ : ಸುಂಟಿಕೊಪ್ಪದಲ್ಲಿ ಜೆಡಿಎಸ್ ಪೂರ್ವ ಸಿದ್ಧತಾ ಸಭೆ

02/12/2020

ಮಡಿಕೇರಿ ಡಿ.2 : ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಸುಂಟಿಕೊಪ್ಪ ಹೋಬಳಿ ಜಾತ್ಯತೀತ ಜನತಾದಳದ ವತಿಯಿಂದ ಚುನಾವಣಾ ಪೂರ್ವ ಸಿದ್ಧತಾ ಸಭೆ ನಡೆಯಿತು.
ಸುಂಟಿಕೊಪ್ಪ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಜೆಡಿಎಸ್ ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ, ಜನಪರ ಕಾಳಜಿಯೊಂದಿಗೆ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಪಕ್ಷವಾಗಿದೆ ಎಂದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಮೂಲಕ ಹಿತ ಕಾಯುವ ಕಾರ್ಯವನ್ನು ಮಾಡಬೇಕು. ರಾಜಕೀಯ ಕ್ಷೇತ್ರದಲ್ಲೂ ಇದು ನಡೆಯಬೇಕೆಂದು ಕರೆ ನೀಡಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸುಂಟಿಕೊಪ್ಪ ಜೆಡಿಎಸ್ ನಗರಾಧ್ಯಕ್ಷರನ್ನಾಗಿ ಶಬೀರ್ ಅವರನ್ನು ಇದೇ ಸಂದರ್ಭ ನೇಮಕ ಮಾಡಲಾಯಿತು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಷರೀಫ್, ಹಿರಿಯ ಮುಖಂಡ ಕರೀಂ, ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನೀಲ್, ಹರ್ಷದ್, ಆಶಿಕ್‍ಖಾನ್, ನಗರಾಧ್ಯಕ್ಷ ಕೌಶಿಕ್ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.