ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವ ಧನ ಹೆಚ್ಚಳಕ್ಕೆ ಒತ್ತಾಯ : ಮಡಿಕೇರಿಯಲ್ಲಿ ಪ್ರತಿಭಟನೆ

02/12/2020

ಮಡಿಕೇರಿ ಡಿ. 2 : ರಾಜ್ಯದ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವ ಧನವನ್ನು ದ್ವಿಗುಣಗೊಳಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ವಿಶೇಷ ಶಿಕ್ಷಕರು ಹಾಗೂ ಸಂಘದ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಪದಾಧಿಕಾರಿ ಎಸ್.ಸಿ. ಶಿವರಾಜ್, ರಾಜ್ಯದ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸುವಂತೆ ಮುಖ್ಯ ಮಂತ್ರಿಗಳಿಗೆ, ಸಚಿವರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಸಕಾರಾತ್ಮಕ ಸ್ಪಂದನೆ ನೀಡದಿರುವುದು ಖಂಡನೀಯ ಎಂದರು.
2010-11 ರಲ್ಲಿ ರಾಜ್ಯದ ವಿಶೇಷ ಶಾಲೆಗಳಿಗೆ “ಶಿಶು ಕೇಂದ್ರೀಕೃತ ಸಹಾಯಧನ ಯೋಜನೆ” ಎಂಬ ಅನುದಾನ ನೀತಿಯನ್ನು ಜಾರಿಗೆ ತಂದು ವಿಶೇಷ ಶಾಲೆಗಳಲ್ಲಿರುವ ವಿಕಲಚೇತನ ಮಕ್ಕಳ ತಲೆ ಎಣಿಕೆ ಆಧಾರದ ಮೇಲೆ ಅನುದಾನ ಮಂಜೂರು ಮಾಡಲು ನಿರ್ಧರಿಸಲಾಗಿತ್ತು. ವಿಶೇಷ ಶಿಕ್ಷಕರಿಗೆ ರೂ.6,500 ಗೌರವಧನ ಮತ್ತು ಇತರ ಸಿಬ್ಬಂದಿಗಳಿಗೆ ರೂ.4 ರಿಂದ 5 ಸಾವಿರದವರೆಗೆ ಗೌರವಧನ ನೀಡಲಾಗುತ್ತಿತ್ತು.
ಆ ನಂತರ 2013-14ನೇ ರಾಜ್ಯ ಬಜೆಟ್‍ನಲ್ಲಿ ವಿಶೇಷ ಶಿಕ್ಷಕರ ಗೌರವಧನವನ್ನು 13,500ಕ್ಕೆ ಹಾಗೂ ಇತರ ಸಿಬ್ಬಂದಿಗಳಿಗೆ ರೂ.9000 ಗೌರವಧನವನ್ನು ಏರಿಕೆ ಮಾಡಲಾಗಿತ್ತು. ಆದರೆ 2014 ರಿಂದ ಇಲ್ಲಿಯವರೆಗೆ ವಿಶೇಷ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಗೌರವಧನವನ್ನು ಏರಿಕೆ ಮಾಡಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಶಿಶು ಕೇಂದ್ರೀಕೃತ ಸಹಾಯಧನ ಯೋಜನೆಯಡಿ ಸುಮಾರು 141 ವಿಶೇಷ ಶಾಲೆಗಳು ರಾಜ್ಯ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಅನುದಾನವನ್ನು ಪಡೆಯುತ್ತಿದ್ದು, ಈ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಕೇಂದ್ರ ಸರಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಕೂಡ ದೊರೆಯುತ್ತಿಲ್ಲ. ಇದರಿಂದÉ ಜೀವನ ನಿರ್ವಹಣೆಯೇ ದುಸ್ತರವಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ 25 ವರ್ಷ ಮೀರಿದ ವಿಕಲಚೇತನ ವಯಸ್ಕರಿಗೆ ಸಂಬಂಧಿಸಿದ ಇಲಾಖೆಯಿಂದ ಯಾವುದೇ ತರಬೇತಿಯನ್ನಾಗಲಿ ಅಥವಾ ಪುನರ್ವಸತಿ ಕಾರ್ಯಕ್ರಮಗಳನ್ನಾಗಲಿ ಮಾಡಿಲ್ಲ. 2016ಕ್ಕೆ ಜಾರಿಗೆ ಬಂದಿರುವ ನೂತನ ಅಂಗವಿಕಲರ ಅಧಿನಿಯಮ ಕೇವಲ ಕಡತಕ್ಕೆ ಸೀಮಿತವಾಗಿರುವುದು ದುರಾದೃಷ್ಟಕರವೆಂದು ಟೀಕಿಸಿದ್ದಾರೆ.
ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಗೀತಾ ಶ್ರೀಧರ್, ವೀಣಾ ನಾರಾಯಣ್, ಕೆ.ಯು.ಸಂಶಿದ, ಎಂ.ಬಿ.ಶಾಹಿನ, ಎಂ.ಜಿ.ನವೀನ್, ವಿಶೇಷ ಶಿಕ್ಷಕರಾದ ನೇತ್ರವಾತಿ, ರೇಖಾ, ರೋನಿಕ, ಶಿಕ್ಷಕೇತರರಾದ ಸುನೀಲ್, ಧರಣೇಶ್, ಅನಿತ, ಫಿಲೋಮಿನ, ಸರೋಜ ಹಾಗೂ ಪೋಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.