ಕುಟ್ಟದಲ್ಲಿ ಲಾಟರಿ ದಂಧೆ : ಕೇರಳದ ವ್ಯಕ್ತಿಯ ಬಂಧನ

02/12/2020

ಮಡಿಕೇರಿ ಡಿ.2 : ಕೇರಳ ರಾಜ್ಯದ ಲಾಟರಿಗಳನ್ನು ದಕ್ಷಿಣ ಕೊಡಗಿನ ಕುಟ್ಟದಲ್ಲಿ ಮಾರಾಟ ಮಾಡುತ್ತಿದ್ದ ಕಾಟಿಕುಳಂ ವ್ಯಕ್ತಿಯನ್ನು ಕುಟ್ಟ ಪೊಲೀಸರು ಬಂಧಿಸಿದ್ದಾರೆ.
ಕಾಟಿಕುಳಂ ನಿವಾಸಿ ಸುರೇಶ ಎಂಬಾತನೇ ಬಂಧಿತ ಆರೋಪಿ. ಈತ ಕುಟ್ಟ ಪಟ್ಟಣದ ತನ್ನ ಅಂಗಡಿಯಲ್ಲಿ ಕರ್ನಾಟಕದಲ್ಲಿ ನಿಷೇಧಿತವಾಗಿರುವ ಕೇರಳ ರಾಜ್ಯದ ಲಾಟರಿ ಟಿಕೆಟ್‍ಗಳನ್ನು ಮಾರಾಟ ಮಾಡುತಿದ್ದ. ಖಚಿತ ಮಾಹಿತಿಯಾಧರಿಸಿ ಕುಟ್ಟ ವೃತ್ತ ನಿರೀಕ್ಷಕ ಎಸ್.ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದರು.
ಲಾಟರಿ ಟಿಕೆಟ್ ಹಾಗೂ ಮಾರಾಟ ಮಾಡಿ ಬಂದ ಹಣ ರೂ.1200 ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಡಗು ಜಿಲ್ಲಾ ಗಡಿ ಭಾಗದ ಗ್ರಾಮಗಳಲ್ಲಿ ಈ ರೀತಿಯ ಯಾವುದೇ ಅವ್ಯವಹಾರ ನಡೆಯುತ್ತಿರುವುದು ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.