ಹಾರಂಗಿ ಹೂಳೆತ್ತುವ ಕಾಮಗಾರಿಗೆ ಶೀಘ್ರ ಚಾಲನೆ : ಶಾಸಕ ಅಪ್ಪಚ್ಚುರಂಜನ್ ಭರವಸೆ

02/12/2020

ಮಡಿಕೇರಿ ಡಿ.2 : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯ ಹಾಗೂ ಅದರ ಉಪ ನದಿಗಳಲ್ಲಿ ತುಂಬಿರುವ ಹೂಳೆತ್ತುವ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಹೂಳೆತ್ತುವ ಕಾಮಗಾರಿಗಳಿಗೆ ಈಗಾಗಲೇ 130 ಕೋಟಿ ರೂ. ಹಣ ಮಂಜೂರಾಗಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಹಾರಂಗಿ ನದಿ ಹಾಗೂ ಅದರ ಉಪ ನದಿಗಳಲ್ಲಿ ಸಾಕಷ್ಟು ಹೂಳು ಶೇಖರಣೆಯಾಗಿದ್ದು, ಇದರಿಂದಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ಮಳೆಗಾಲದಲ್ಲಿ ಬೇಗನೆ ಜಲಾಶಯ ಭರ್ತಿಯಾಗುತ್ತಿದ್ದರೂ, ರೈತರ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಅಣೆಕಟ್ಟೆಯಲ್ಲಿ ತುಂಬಿರುವ ಹೂಳು ಎತ್ತಲು 38 ಕೋಟಿ, ಹಟ್ಟಿಹೊಳೆ ಮತ್ತು ಮಾದಾಪುರವರೆಗೆ ನದಿ ಪಾತ್ರದ ತಡೆಗೊಡೆ ನಿರ್ಮಾಣಕ್ಕೆ 77 ಕೋಟಿ ಬಳಸಲಾಗುವುದು. ಉಳಿದ ಹಣದಲ್ಲಿ ನದಿ ದಂಡೆಯ ಸಂರಕ್ಷಣೆ ಮಾಡಲಾಗುವುದು.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕ್ರಿಯಾ ಯೋಜನೆಗನುಗುಣವಾಗಿ ಕಾಮಗಾರಿ ಆರಂಭವಾಗಲಿದೆ ಎಂದರು.