ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ

03/12/2020

ಬೆಂಗಳೂರು ಡಿ.3 : ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜ್ಯದ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಪ್ರತಿದಿನ 5000 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡುವ ನಿಟ್ಟಿನಲ್ಲಿ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಈ ಘಟಕದಲ್ಲಿ ದಿನಕ್ಕೆ 600 ಟನ್ ಸಂಸ್ಕರಿತ ತ್ಯಾಜ್ಯ ಬಳಸಿ, 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗುತ್ತಿದ್ದು, ಕರ್ನಾಟಕ ವಿದ್ಯುತ್ ನಿಗಮ ಹಾಗೂ ಬಿಬಿಎಂಪಿ ಯವರು ತಲಾ 130 ಕೋಟಿ ವೆಚ್ಚ ಭರಿಸಲಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಘಟಕದ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಇದರಿಂದ ಬೆಂಗಳೂರಿನ ಶೇಕಡಾ 25 ರಷ್ಟು ಮಿಶ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ.
ಸನ್ಮಾನ್ಯ ಪ್ರಧಾನ ಮಂತ್ರಿಯವರು ಚಾಲನೆ ನೀಡಿರುವ “ಆತ್ಮ ನಿರ್ಭರ್ ಭಾರತ್” ಯೋಜನೆಯನ್ವಯ ಈ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ಬಳಸುವ ಹೆಚ್ಚಿನ ವಸ್ತುಗಳು ಸ್ವದೇಶಿಯದ್ದೇ ಆಗಿರುತ್ತದೆ ಎಂದು ಮುಖ್ಯಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.