ಸೋಮವಾರಪೇಟೆಯಲ್ಲಿ ವರ್ತಕರ ಸಭೆ : ಅಪರಾಧ ತಡೆಗೆ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ : ವೃತ್ತನಿರೀಕ್ಷಕ ಮಹೇಶ್ ಮಾಹಿತಿ

03/12/2020

ಮಡಿಕೇರಿ ಡಿ. 3 : ಸೋಮವಾರಪೇಟೆ ಪಟ್ಟಣದಲ್ಲಿ ಅಪರಾದ ತಡೆ ಹಾಗೂ ಸಂಚಾರವ್ಯವಸ್ಥೆಗೆ ಸಿ.ಸಿ.ಟಿ.ವಿ ಕಣ್ಗಾವಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವೃತ್ತನಿರೀಕ್ಷಕ ಮಹೇಶ್ ತಿಳಿಸಿದ್ದಾರೆ.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ವರ್ತಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಪರಾಧ ಪ್ರಕರಣಗಳು ಹಾಗೂ ಪಾರ್ಕಿಂಗ್ ಮತ್ತು ಸುಗಮ ಸಂಚಾರವ್ಯವಸ್ಥೆಗೆ ಸಿ.ಸಿ.ಟಿ.ವಿ ಸಹಕಾರಿಯಾಗುತ್ತಿದ್ದು, ಪಟ್ಟಣದ ಎಲ್ಲಾ ಪ್ರವೇಶಗಳು ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ಒಟ್ಟು 8 ಕ್ಯಾಮರಾ ಅಳವಡಿಸಿ ಅದನ್ನು ಠಾಣೆಯಲ್ಲಿ ನಿರ್ವಹಿಸಲಾಗುವುದು ಈ ಯೋಜನೆಗೆ ವರ್ತಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರ ಕಾಣಬೇಕಾಗಿದೆ. ಸಾಧ್ಯವಾದಷ್ಟು ವರ್ತಕರು ತಮ್ಮ ಅಂಗಡಿಗಳಲ್ಲಿ ಕ್ಯಾಮೆರಾ ಅಥವಾ ಸೈರನ್ ಅಳವಡಿಸಿ ಎಂದರು. ವ್ಯಾಪಾರದ ನಂತರ ಹಣವನ್ನು ಅಂಗಡಿಯಲ್ಲಿಡದೆ ಮನೆಗೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದರು.
ಖಾಸಗಿ ಬಸ್ಸುನಿಲ್ದಾಣದಲ್ಲಿ ಸಂಜೆ 7 ಗಂಟೆಯ ನಂತರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ,ಅಲ್ಲಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ,ರಸ್ತೆಯ ಎರೆಡು ಬದಿಯಲ್ಲಿ ನಿಲುಗಡೆಗೆ ಅವಕಾಶ ನೀಡಬೇಡಿ, ಅತಿಯಾದ ಶಬ್ದ, ವೇಗವಾಗಿ ಓಡಿಸುವ ಹಾಗೂ ದ್ವಿಚಕ್ರವಾಹನಗಳಲ್ಲಿ ಮೂರು ಮಂದಿ ಇರುವ ವಾಹಣಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ, ಗೊತ್ತಿಲ್ಲದೆ ಏಕ ಮುಖ ಸಂಚಾರದಲ್ಲಿ ಬರುವ ಪ್ರವಾಸಿಗರಿಗೆ ರಿಯಾಯಿತಿ ನೀಡುವಂತೆ ಸಲಹೆ ನೀಡಿದರು.

ಈ ಸಂದರ್ಭ ಠಾಣಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.