ದೊಡ್ದತೋಳುರು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯ ಲೋಕಾರ್ಪಣೆ

03/12/2020

ಮಡಿಕೇರಿ ಡಿ. 3 : ಸೋಮವಾರಪೇಟೆ ತಾಲೂಕಿನ ತೋಳುರುಶೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ದೊಡ್ದತೋಳುರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರ ಗೊಂಡಿರುವ ಶ್ರೀ ಬಸವೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.

ಬುಧವಾರ ಈಶ್ವರ, ಬಸವೇಶ್ವರ, ಗಣಪತಿ, ಲಕ್ಷ್ಮಿ, ನಾಗದೇವತೆಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಪ್ರಾರಂಭೋತ್ಸವ ನಡೆಯಿತು. ವೇದಬ್ರಹ್ಮ ಯು.ಆರ್.ಶೇಷಾಚಲ ಅವರ ನೇತೃತ್ವದಲ್ಲಿ ಬುಧವಾರ ಸಂಜೆಯಿಂದ ಗಣಪತಿ ಪೂಜೆ,ದೀಪಾರಾಧನೆ,ಕಳಸ, ಸ್ಥಾಪನೆ, ವೇದಪಾರಾಯಣ, ವಾಸ್ತು ಪೂಜೆ,ವಾಸ್ತು ಬಲಿ, ಮಹಾಪೂಜೆ ನಡೆಯಿತು.

ಗುರುವಾರ ಗ್ರಾಮದ ಹೊಳೆಯಲ್ಲಿ ಗಂಗೆಪೂಜೆ ನೆರವೇರಿಸಿ ಗ್ರಾಮದ ಮಹಿಳೆಯರಿಂದ (ಕಳಸ) ಕುಂಭ ಮೆರವಣಿಗೆ ನಡೆಯಿತು. ನಂತರ ಕಳಸ ಪ್ರತಿಷ್ಠಾಪನೆ, ಕಳಸ ಪೂಜೆ, ಗಣಪತಿ ಹೋಮ, ಮೃತ್ಯುಂಜಯ ಹೋಮ,ನವಗ್ರಹ ಹೋಮ,ಮಹಾಬಲಿ, ಮಹಾಮಂಗಳಾರತಿ,ಪ್ರಸಾದ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನೆರವೇರಿದವು.

ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ದೇವಾಲಯ ಶಿಥಿಲವಸ್ಥೆಗೆ ತಲುಪಿದರಿಂದ ಸುಮಾರು 25 ರೂ. ಲಕ್ಷ ವೆಚ್ಚದಲ್ಲಿ ನೂತನವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಡಿ. ಕುಶಾಲಪ್ಪ,ಕಾರ್ಯದರ್ಶಿ ಜಯೇಂದ್ರ.ಕೆ.ಹೆಚ್,ಗ್ರಾಮಸಮಿತಿಯ ಅಧ್ಯಕ್ಷ ಎ.ಜೆ.ಕೃಷ್ಣಪ್ಪ,ಚಂದ್ರಾಜ್, ಜಯೇಂದ್ರ.ಕೆ.ಹೆಚ್,ರಮೇಶ್.ಹೆಚ್.ಸಿ,ರಜಿತ್.ಎ.ಆರ್, ಬೊಪ್ಪಯ್ಯ.ಬಿ.ಈ, ವಿಜಯಪ್ರಕಾಶ್ ಯುವಕ ಸಂಘದ ಗಿರೀಶ್,ಆದರ್ಶ್.ಬಿ.ಬಿ,ಕಿರ್ತನ್, ಪ್ರದಾನ ಅರ್ಚಕರಾದ ಮನು ಭಟ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.