ಡಿ.5ರಂದು ಕುರುಳಿ ಅಂಬಲ ಮಂದ್‍ನಲ್ಲಿ “ಪುತ್ತರಿ ಕೋಲ್”

03/12/2020

ಮಡಿಕೇರಿ ಡಿ. 3 : ಇತಿಹಾಸ ಪ್ರಸಿದ್ಧವಾದ ಕುರುಳಿ ಅಂಬಲ ಕೋಲ್‍ಮಂದ್‍ನಲ್ಲಿ ಡಿ.5ರ ಪುತ್ತರಿಕೋಲ್ ನಡೆಯಲಿದೆ.
ಇಗುತ್ತಪ್ಪ ದೇವರು ಮೊದಲು ಕಡಗದಾಳುವಿನ ಕುರುಳಿಅಂಬಲಮಂದ್‍ನಲ್ಲಿ ನೆಲೆ ನಿಂತು ನೀರಿನ ಅಭಾವದಿಂದಾಗಿ ಬೆಟ್ಟದಸಾಲುಗಳ ಕಡೆ ಬಾಣಬಿಟ್ಟಾಗ ಕಕ್ಕಬೆ ಬೆಟ್ಟಸಾಲುಗಳ ನಡುವೆ ಬಾಣ ಬಿದ್ದು ಆ ಜಾಗದಲ್ಲಿ ಪಾಡಿ ಇಗ್ಗುತ್ತಪ್ಪನ ನೆಲೆಯಾಯಿತು ಎಂದು ಪ್ರತೀತಿ ಇದೆ.
ಎಲ್ಲೂ ಸೇರದ ಕುರುಳಿ ಹಕ್ಕಿ ಹಾಗೂ ತೋರೆಹಕ್ಕಿಗಳೂ ಸೇರಿ ಮಂದ್‍ನಲ್ಲಿ ಮೇಯುತ್ತಿದ್ದದ್ದರಿಂದ ಈ ಮಂದ್‍ಗೆ ಕುರಳಿ ಅಂಬಲಮಂದ್ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಹಿಂದಿನ ಕಾಲದಲ್ಲಿ ನ್ಯಾಯ ಪೀಠವಿದ್ದು, ಊರಿನ ವ್ಯಾಜ್ಯೆಗಳೆಲ್ಲ ಇಲ್ಲಿ ಇತ್ಯರ್ಥಗೊಳ್ಳುತಿದ್ದು, ಈ ದೇವನೆಲೆಯಲ್ಲಿ ಸತ್ಯ ಪ್ರಮಾಣ ಮಾಡುತ್ತಿದ್ದ ಬಗ್ಗೆ ಹಿರಿಯರು ಹೇಳುತ್ತಾರೆ.
ಪುತ್ತರಿನಮ್ಮೆಗೆ ಮುಂಚಿತವಾಗಿ ಈಡ್ ತೆಗೆದು ಡಿ.3 ರಂದು ಬೆಳಿಗ್ಗೆ ತಕ್ಕಮುಖ್ಯಸ್ಥರ ಮುಂದಾಳತ್ವದಲ್ಲಿ ಮಂದ್ ತೆರೆಯಲಾಯಿತು. ನಂತರ ನಿತ್ಯವೂ ಊರಿನವರು ಕೋಲಾಟ್ ನಡೆಸುವರು. ಡಿ. 5ರ ಶನಿವಾರ ಮಧ್ಯಾಹ್ನ ತಕ್ಕರ ಮನೆಗೆ ತೆರಳಿ ಊರಿನ ಸಂಪ್ರದಾಯದೊಂದೊಗೆ ಮಂದ್‍ಗೆ ತಕ್ಕರನ್ನು ಕರೆತರುವರು. ನಂತರ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಮೇದರ ಕೊಟ್ಟಿಗೆ ಪುತ್ತರಿಕೋಲಾಟ್ ಪ್ರದರ್ಶನ ಏರ್ಪಡುವುದು. ಭಾನುವಾರ ವಿಷ್ಣುಮೂರ್ತಿ ಪೂಜೆ ನಡೆದು ರಾತ್ರಿ ದೇವನೆಲೆಯಲ್ಲಿ ಕೋಲನ್ನು ಒಪ್ಪಿಸುವರು. ಕುರುಳಿ ಅಂಬಲ ಕೋಲ್‍ಮಂದಿನಲ್ಲಿ ಕೋಲನ್ನು ಒಪ್ಪಿಸಿದ ನಂತರ ಎಲ್ಲೂ ಕೋಲ್ ಹೊಡೆಯ ಬಾರದೆಂಬ ನಿಯಮ ತಲತಲಾಂತರದಿಂದ ನಡೆದು ಬಂದಿದೆ.
ಕೋವಿಡ್ ಇರುವುದರಿಂದ ಹಲವು ನಾಡುಗಳು ಸೇರಿ ನಡೆಸಿಕೊಂಡು ಬಂದಿರುವ ಪುತ್ತರಿ ಕೋಲಾಟನ್ನು ಈ ವರ್ಷ ಸ್ಥಳೀಯ ಊರಿನವರು ಸೇರಿ ಆಚರಿಸುವಂತೆ ತೀರ್ಮಾನಿಸಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.