ರಸ್ತೆ ಕಾಮಗಾರಿ ಆರಂಭಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರ : ಕುಂಬಳದಾಳು, ಕುಯ್ಯಂಗೇರಿ ಗ್ರಾಮಸ್ಥರ ಎಚ್ಚರಿಕೆ

December 3, 2020

ಮಡಿಕೇರಿ ಡಿ.3 : ನೆನೆಗುದಿಗೆ ಬಿದ್ದಿರುವ ಮೂರ್ನಾಡು-ಕುಂಬಳದಾಳು, ಕುಯ್ಯಂಗೇರಿ ಮತ್ತು ನಾಪೋಕ್ಲು ರಸ್ತೆ ಕಾಮಗಾರಿಯನ್ನು ಶೀಘ್ರ ಆರಂಭಿಸದಿದ್ದಲ್ಲಿ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕುಂಬಳದಾಳು ಹಾಗೂ ಕುಯ್ಯಂಗೇರಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಂಬಳದಾಳು ಗ್ರಾಮಸ್ಥರಾದ ತೆಕ್ಕಡೆ ಗಣಪತಿ, ಮೂರ್ನಾಡು, ಕುಂಬಳದಾಳು, ಕುಯ್ಯಂಗೇರಿ ನಾಪೆÇೀಕ್ಲುವಿನ ಸುಮಾರು 9ಕಿ.ಮೀ ನಷ್ಟು ರಸ್ತೆ ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ಕೊಡಗಿನ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಗ್ರಾಮಸ್ಥರ ಮನವಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದದರು.
ಈ ಹಿಂದೆ ಕುಂಬಳದಾಳು, ಕುಯ್ಯಂಗೇರಿ, ಹೊದವಾಡ, ಕೊಟ್ಟಮುಡಿ ಹಾಗೂ ಹೊದ್ದೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕುಂಬಳದಾಳು ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 2018ರ ಫೆಬ್ರವರಿಯಲ್ಲಿ ಸುಮಾರು 3 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಅಲ್ಲದೇ 2019ರಲ್ಲಿ ಕಾಮಗಾರಿ ಆರಂಭಗೊಂಡು ಸರ್ಕಾರ ಬದಲಾದ ಕಾರಣ ಇದೀಗ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಗಣಪತಿ ಆರೋಪಿಸಿದರು.
ಇದರಿಂದ ವಾಹನ ಸವಾರರು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕವು ಗಮನ ಸೆಳೆಯಲಾಗಿದ್ದರೂ ಯಾವುದೇ ಸ್ಪಂದನೆ ನೀಡದಿರುವುದರಿಂದ ಗ್ರಾಮಸ್ಥರು ಖುದ್ದು ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದು, ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿ ಇಲ್ಲಿಯವರೆಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿರುವುದರಿಂದ ಗ್ರಾಮದಲ್ಲಿರುವ ಐನೂರಕ್ಕೂ ಹೆಚ್ಚಿನ ಮತದಾರರು ಈ ಬಾರಿಯ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸಲಿದ್ದಾರೆಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥ ತೆಕ್ಕಡೆ ಆರ್. ಸುನಂದ ಮಾತನಾಡಿ, ಮೂರ್ನಾಡು ಸಮೀಪದ ಕುಂಬಳದಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಭಾಗದಲ್ಲಿ ದುರಸ್ತಿ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.
ರಸ್ತೆ ದುರಸ್ತಿ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ. ಆದ್ದರಿಂದ ಕುಂಬಳದಾಳು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಕಷ್ಟು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಮೂರ್ನಾಡು ಕುಂಬಳದಾಳು ರಸ್ತೆಯನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು. ಕುಂಬಳದಾಳು ಕಡೆಗೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಮೂರ್ನಾಡಿನ ಮಿಲ್ ಕಟ್ಟಡವನ್ನು ತೆರವುಗೊಳಿಸಬೇಕು ಮತ್ತು ನಿಂತು ಹೋಗಿರುವ ಬಸ್ ಸಂಚಾರವನ್ನು ಮತ್ತೆ ಆರಂಭಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಡಿ.ಪಿ.ಸುಜಿತ್ ಕುಮಾರ್, ಸಿ.ಎಲ್.ಪ್ರಶಾಂತ್, ಕೆ.ಪಿ.ಪೃಥ್ವಿ ಹಾಗೂ ಕರ್ಣಯ್ಯನ ನಾಗೇಶ್ ಉಪಸ್ಥಿತರಿದ್ದರು.

error: Content is protected !!