ಚಿರತೆ ಚರ್ಮ ಸಾಗಾಟ : ಐಮಂಗಲದಲ್ಲಿ ಆರೋಪಿ ಬಂಧನ

03/12/2020

ಮಡಿಕೇರಿ ಡಿ.3 : ಚಿರತೆ ಚರ್ಮವನ್ನು ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ವಿರಾಜಪೇಟೆ ಅರಣ್ಯ ಸಂಚಾರಿ ದಳದ ಪೊಲೀಸರು ವಿರಾಜಪೇಟೆ ಹೊರವಲಯ ಐಮಂಗಲದಲ್ಲಿ ಬಂಧಿಸಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ನಿವಾಸಿ ಪೌತಿ ಕಲೀಲ್ ಎಂಬುವವರ ಪುತ್ರ ಮಹಮ್ಮದ್ ಕಬೀರ್ ಕೆ. (30) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಮತ್ತೋರ್ವ ಆರೋಪಿ ಮಡಿಕೇರಿ ತಾಲೂಕಿನ ಎಡಪಾಲ ಗ್ರಾಮ ನಿವಾಸಿ ರಷೀದ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡು ಚಿರತೆ ಚರ್ಮವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಚಿರತೆಯ ಚರ್ಮವನ್ನು ಅಪರಿಚಿತ ಸ್ಥಳದಿಂದ ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಿದ್ದಾಪುರದಿಂದ ವಿರಾಜಪೇಟೆ ಕಡೆಗೆ ತಮ್ಮ ದ್ವಿಚಕ್ರ ವಾಹನ (ಕೆಎ-12ಹೆಚ್-6201) ಬಜಾಜ್ ಸಿಟಿ 100ನಲ್ಲಿ ಆಗಮಿಸಿದ್ದಾರೆ. ಈ ಬಗ್ಗೆ ವಿರಾಜಪೇಟೆ ತಾಲೂಕು ಸಿ.ಐ.ಡಿ ಅರಣ್ಯ ಸಂಚಾರಿ ದಳಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಸಿದ್ದಾಪುರ-ವಿರಾಜಪೇಟೆ ಮಾರ್ಗದ ಮಧ್ಯೆ ಐಮಂಗಲದ ಸಾರ್ವಜನಿಕ ಬಸ್ಸು ತಂಗುದಾಣದ ಬಳಿ ಎಲ್ಲಾ ವಾಹನಗಳ ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಬೈಕ್ ಅನ್ನು ತಪಾಸಣೆ ನಡೆಸಲು ಮುಂದಾದಾಗ ಬೈಕ್‍ನಲ್ಲಿದ್ದ ಇಬ್ಬರು ಪೈಕಿ ಓರ್ವ ಪರಾರಿಯಾಗಿದ್ದಾನೆ. ಶಂಕಿತರಾದ ಪೊಲೀಸರು ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಚಿರತೆಯ ಚರ್ಮವಿರುವುದು ಕಂಡು ಬಂದಿದೆ. ತಕ್ಷನವೇ ಆರೋಪಿಯನ್ನು ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ 2 ಚಿರತೆಯ ಚರ್ಮವನ್ನು 5 ಲಕ್ಷ ರೂ. ಮಾರಾಟ ಮಾಡುವ ಉದ್ದೇಶವಿತ್ತು ಎಂದು ಮಾಹಿತಿ ನೀಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಕಬೀರ್ ವಿರುದ್ದ ವನ್ಯಜೀವಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಿರಾಜಪೇಟೆ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಧೀಶರು 15 ದಿನಗಳ ಕಾಲ ನ್ಯಾಯಂಗ ಬಂಧನದಲ್ಲಿಡಲು ಆದೇಶ ನೀಡಿದ್ದಾರೆ.
ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಉಪ ನಿರೀಕ್ಷಕಿ ಕು.ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಪಿ.ಬಿ.ಮೊಣ್ಣಪ್ಪ ಮತ್ತು ಎಸ್.ಎಂ. ಯೋಗೇಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.