ಬಿದಿರು ಮೌಲ್ಯವರ್ಧನ ಘಟಕ ಉದ್ಘಾಟನೆ : ಕೋಲಾರ ಕೃಷಿ ಪದ್ಧತಿ ಅನುಸರಿಸಿ : ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ

03/12/2020

ಮಡಿಕೇರಿ ಡಿ.3 : ರಾಷ್ಟ್ರೀಯ ಕೃಷಿ ದಿನದ ಪ್ರಯುಕ್ತ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕ ವಿಶ್ವ ವಿದ್ಯಾಲಯದ ವ್ಯಾಪ್ತಿಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ಬಿದಿರು ಸಸ್ಯ ಕ್ಷೇತ್ರ, ಬಿದಿರು ಸಂಸ್ಕರಣೆ ಮತ್ತು ಬಿದಿರು ಮೌಲ್ಯವರ್ಧನ ಘಟಕಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಗುರುವಾರ ಉದ್ಘಾಟಿಸಿದರು.
‘ಬಿದಿರು ಸಸ್ಯ ಕ್ಷೇತ್ರ ಹಾಗೂ ಬಿದಿರು ಸಂಪನ್ಮೂಲ ಕೇಂದ್ರ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವರು ‘ಅರಣ್ಯ ಇದ್ದರೆ ಮಳೆ, ಮಳೆ ಬಂದರೆ ಸಮೃದ್ಧಿ ಬೆಳೆ, ಬೆಳೆ ಬೆಳೆದಲ್ಲಿ ಉತ್ತಮ ಬದುಕು ಎಂದು ಸಚಿವರು ವರ್ಣಿಸಿದರು.’
ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವ ನಿಟ್ಟಿನಲ್ಲಿ, ಇಸ್ರೇಲ್ ಮಾದರಿ ಬೇಕಿಲ್ಲ, ಕೋಲಾರ ಜಿಲ್ಲೆಯ ಕೃಷಿ ಮಾದರಿ ಪದ್ಧತಿಯನ್ನು ಅಳವಡಿಸಿಕೊಂಡರೆ ರೈತರು ಆತ್ಮಹತ್ಯೆಗೆ ಮುಂದಾಗುವುದು ತಪ್ಪುತ್ತದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬನ್ನು ಪ್ರಧಾನ ಹಾಗೂ ವಾರ್ಷಿಕ ಕೃಷಿ ಬೆಳೆಯಾಗಿ ಬೆಳೆಯುತ್ತಾರೆ. ಆದರೆ ಕೋಲಾರ ಜಿಲ್ಲೆಯಲ್ಲಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಬಹು ಬೆಳೆ ಪದ್ಧತಿಯಿಂದ ಕೃಷಿ ಕ್ಷೇತ್ರದಲ್ಲಿ ಆದಾಯ ಗಳಿಸಬಹುದು ಎಂದು ಕೃಷಿ ಸಚಿವರು ಹೇಳಿದರು.
ಕೃಷಿ ಜತೆಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ಮಿಶ್ರ ಬೆಳೆ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಬಿ.ಸಿ.ಪಾಟೀಲ್ ಅವರು ಪ್ರತಿಪಾದಿಸಿದರು.
ರೈತರು ಆತ್ಮವಿಶ್ವಾಸದಿಂದ ಬದುಕಬೇಕು, ಕೃಷಿ ನಂಬಿದರೆ ಕೈಬಿಡುವುದಿಲ್ಲ, ವೈಜಾÐನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು ಅವರು ಸಚಿವರು ಹೇಳಿದರು.
ವರ್ಷಕ್ಕೋಮ್ಮೆಯಾದರು ಮಣ್ಣು ಪರೀಕ್ಷೆ ಮಾಡಿಸುವುದು ಅಗತ್ಯ. ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಸ್ವತ: ಮಾರುಕಟ್ಟೆ ಮಾಡುವಂತಾಗಬೇಕು ಎಂದು ಕೃಷಿ ಸಚಿವರು ಸಲಹೆ ಮಾಡಿದರು
ಕೃಷಿ, ಅರಣ್ಯ, ತೋಟಗಾರಿಕೆ, ಪಶುಪಾಲನೆ ಹಾಗೂ ಮೀನುಗಾರಿಕೆ ಇಲಾಖೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಅರಣ್ಯ ಮಹಾ ವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳು ಭಾರತೀಯ ಅರಣ್ಯ ಸೇವೆ, ರಾಜ್ಯದ ವಿವಿಧ ಅರಣ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅರಣ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವರು ತಿಳಿಸಿದರು.
ಪ್ರತಿ ಕುಗ್ರಾಮಗಳಿಗೂ ಅಡುಗೆ ಅನಿಲ ಪೂರೈಕೆಯಾಗುತ್ತಿರುವುದರಿಂದ ಕಾಡು ಕಡಿಯುವುದು ಕಡಿಮೆಯಾಗಿದೆ. ಆ ನಿಟ್ಟಿನಲ್ಲಿ ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ಸುಧಾರಣೆಯಾಗುತ್ತಿದೆ ಎಂದು ಬಿ.ಸಿ.ಪಾಟೀಲ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಣ್ಯ ಸಚಿವರಾದ ಆನಂದ್ ಸಿಂಗ್ ಅವರು ಮಾತನಾಡಿ ಪೆÇನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಓದಿ ಇಲ್ಲಿಯೇ ವಿವಿಧ ಉನ್ನತ ಹುದ್ದೆ ಪಡೆದಿರುವವರು ಅಧಿಕಾರದಲ್ಲಿ ಇದ್ದು, ತಾವು ಅರಣ್ಯ ಸಂರಕ್ಷಣೆ ಜತೆಗೆ ಅರಣ್ಯದಲ್ಲಿ ವಾಸಿಸುವ ಹಾಡಿಯ ಜನರ ಬದುಕು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಸಲಹೆ ಮಾಡಿದರು.
ಅರಣ್ಯಾಧಿಕಾರಿಗಳು ಹಾಡಿ ಜನರೊಂದಿಗೆ ಸೌರ್ಹದತೆಯಿಂದ ನಡೆದುಕೊಳ್ಳಬೇಕು. ಇದರಿಂದ ಅರಣ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅನುಕೂಲವಾಗಲಿದೆ. ಅದ್ದರಿಂದ ಹಾಡಿ ಜನಗಳ ಸಹಕಾರ ಪಡೆಯಬೇಕು ಎಂದು ಸಲಹೆ ಮಾಡಿದರು.
ಬಿದಿರು ಬೆಳೆಯುವಲ್ಲಿ ದೇಶ 2 ನೇ ಸ್ಥಾನದಲ್ಲಿದೆ. ಬಿದಿರನ್ನು ಹೆಚ್ಚು ಬೆಳೆಯಬೇಕು, ಪ್ರಾಣಿಗಳು ಬದುಕಬೇಕು, ಮಾನವನು ಬದಸುಕಬೇಕು. ಆ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಮಾಡಬೇಕು ಎಂದರು.
ಶಾಸಕರಾದ ಕೆ.ಜಿ.ಬೊಪಯ್ಯ ಅವರು ಮಾತನಾಡಿ ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಬಿದಿರಿನ ಉತ್ಪನ್ನದಿಂದ ರೈತರು ಯಾವ ರೀತಿ ಪ್ರಯೋಜನ ಪಡೆಯಬಹುದು ಎಂದು ಅರಿವು ಮೂಡಿಸಬೇಕು ಅವರು ಹೇಳಿದರು.
ಮಾನವನ ಮತ್ತು ಕಾಡು ಪ್ರಾಣಿಗಳ ಸಂಘರ್ಷ ತಡೆಯುವುದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ, ರೈತರ ಸಮಸ್ಯೆಗಳಿಗೆ ಪೂರಕ ಸ್ಪಂದನೆ ಮತ್ತಿತರ ಬಗ್ಗೆ ತಿಳಿಸಿದರು. ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದಿರುವುದಕ್ಕೆ ಕೆ.ಜಿ.ಬೋಪಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಂ.ಕೆ.ನಾಯಕ್ ಅವರು ಮಾತನಾಡಿ ದೇಶದಲ್ಲಿ 295 ಮೀಲಿಯನ್ ಆಹಾರ ಬೆಳೆಯಲಾಗುತ್ತಿದೆ, 324 ಟನ್ ಮೀಲಿಯನ್ ತರಾಕಾರಿ ಬೆಳೆಯಲಾಗುತ್ತಿದೆ, ಹಾಲಿನ ಉತ್ಪದಾನೆಯಲ್ಲಿ ದೇಶ ಪ್ರಥಮ ಸ್ಥಾನದಲ್ಲಿದೆ, ಸಕ್ಕರೆ ಉತ್ಪಾದನೆ ಹೆಚ್ಚಳವಾಗಿದೆ. ಹೀಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದೆ ಎಂದು ಅವರು ನುಡಿದರು.

  ಪೊನ್ನಂಪೇಟೆ ಅರಣ್ಯ ಕಾಲೇಜು ದೇಶದಲ್ಲಿಯೇ 5 ನೇ ಸ್ಥಾನದಲ್ಲಿ, ಭತ್ತ(ಅಕ್ಕಿ) ತಳಿ ಸಂಶೋಧನಾ ಕೇಂದ್ರವು ಪೊನ್ನಪೇಟೆಯಲ್ಲಿರುವುದು ವಿಶೇಷ ಎಂದು ಅವರು ಹೇಳಿದರು. 
 ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಮತ್ತು ಅರಣ್ಯ ಸಚಿವರಾದ ಆನಂದ್ ಸಿಂಗ್ ಅವರಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಸನ್ಮಾನಿಸಲಾಯಿತು. 
  ಬಿದಿರು ಸಂಪನ್ಮೂಲ ಕೇಂದ್ರದ ಬಗ್ಗೆ ಡಾ.ರಾಮಕೃಷ್ಣ ಹೆಗಡೆ ಪರಿಚಯ ಮಾಡಿದರು. ವೈಯನಾಡು ಜಿಲ್ಲೆಯ ಉರಾವು ಸಂಸ್ಥೆಯ ಡಾ.ಅಬ್ದುಲ್ ಕುಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
  ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾಲಯ ಶಿವಮೊಗ್ಗ ಆಡಳಿತ ಮಂಡಳಿಯ ಸದಸ್ಯರಾದ ಕೆ.ವಿ.ಅರುಣ್ ಕುಮಾರ್, ಬಿ.ಶಿವರಾಮ್, ಸರ್ಕಾರದ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮತ್ತು ರಾಷ್ಟ್ರೀಯ ಬಿದಿರು ನಿರ್ದೇಶಕರಾದ ರಾಜಕುಮಾರ್  ಶ್ರಿವಾತ್ಸವ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್, ವಿರಾಜಪೇಟೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ಮಡಿಕೇರಿ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್, ಜಂಟಿ ಕೃಷಿ ನಿರ್ದೇಶಕರಾದ ಶಾಬಾನ ಎಂ.ಶೇಕ್, ಪೊನ್ನಂಪೇಟೆ ವ್ಯವಸ್ಥಾಪನ ಆಡಳಿತ ಮಂಡಳಿಯ ಸದಸ್ಯರಾದ ಡಾ.ಸಿ.ಜಿ.ಕುಶಾಲಪ್ಪ, ಕೃಷಿ ತೋಟಕಾರಿಕೆ ವಿಶ್ವವಿದ್ಯಾಲಯದ ಆಸ್ತಿ ಅಧಿಕಾರಿಗಳಾದ ಕೆ.ಜಿ.ಚಾಮರಾಜ ಇತರರು ಹಾಜರಿದ್ದರು.
   ವಿದ್ಯಾ ಜಗದೀಶ್ ಪ್ರಾರ್ಥಿಸಿದರು, ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ.ಸಿ.ಜಿ.ಕುಶಾಲಪ್ಪ ಸ್ವಾಗತಿಸಿ, ನಿರೂಪಿಸಿದರು, ವಂದಿಸಿದರು. 
 ಸಭೆಯ ಆರಂಭದಲ್ಲಿ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಮತ್ತು ಅರಣ್ಯ ಸಚಿವರಾದ ಆನಂದ್ ಸಿಂಗ್, ಶಾಸಕರಾದ ಕೆ.ಜಿ.ಬೋಪಯ್ಯ ಇತರರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.