ಆನೆ ಹಾವಳಿ ತಡೆಗೆ 160 ಕಿ.ಮೀ ರೈಲ್ವೆ ಹಳಿ ಬೇಲಿ ನಿರ್ಮಾಣ : ಪೊನ್ನಂಪೇಟೆಯಲ್ಲಿ ಅರಣ್ಯ ಸಚಿವ ಆನಂದ ಸಿಂಗ್ ಭರವಸೆ

03/12/2020

ಮಡಿಕೇರಿ ಡಿ.3 : ಆನೆ ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ 160 ಕಿ.ಮೀ. ಉದ್ದದ ರೈಲ್ವೆಹಳಿ ಬೇಲಿ ನಿರ್ಮಿಸುವ ಗುರು ಹೊಂದಲಾಗಿದ್ದು, ಈ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆನೆ –ಮಾನವ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ ಸೋಲಾರ್ ಫೆನ್ಸಿಂಗ್, ಹ್ಯಾಂಗಿಂಗ್ ಸೋಲಾರ್ ಫೆನ್ಸಿಂಗ್ ಯೋಜನೆ ಅಳವಡಿಸಲಾಗಿದ್ದರೂ, ಇದು ಪರಿಣಾಮಕಾರಿಯಾಗುತ್ತಿಲ್ಲ. ರೈಲ್ವೆ ಹಳಿಗಳನ್ನು ಬಳಸಿ ಬೇಲಿ ನಿರ್ಮಿಸುವುದರಿಂದ ಆನೆಗಳ ಹಾವಳಿ ತಡೆಗಟ್ಟಬಹುದೆಂದು ಶಾಸಕ ಕೆ.ಜಿ.ಬೋಪಯ್ಯ ಅವರು ಕೂಡಾ ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಸಮಗ್ರವಾದ ಮಾಹಿತಿ ನೀಡುವಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವರು ಕೋರಿರುವುದರಿಂದ ವಿಧಾನಸಭಾ ಅಧಿವೇಶನದ ಬಳಿಕ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಅಗತ್ಯವಿರುವ ಅನುದಾನ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ವನ್ಯಪ್ರಾಣಿಗಳು ಸಂಚರಿಸುತ್ತಿದ್ದ ಅನೇಕ ಪ್ರದೇಶಗಳನ್ನು ನಾವು ಒತ್ತುವರಿ ಮಾಡಿಕೊಂಡಿದ್ದು, ವನ್ಯಪ್ರಾಣಿಗಳ ಹಾವಳಿ ಹೆಚ್ಚಳವಾಗಲು ಇದೂ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಆದರೂ ಜನರ ರಕ್ಷಣೆಗಾಗಿ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡಲಾಗುವುದು ಎಂದು ಹೇಳಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಕೆ.ಜಿ.ಬೋಪಯ್ಯ ಮತ್ತಿತರರು ಹಾಜರಿದ್ದರು.