ಕಾಂಗ್ರೆಸ್ ಕಾಲದಲ್ಲಿ ತುಘಲಕ್ ದರ್ಬಾರ್ ನಡೆದಿತ್ತು : ಕೊಡಗು ಬಿಜೆಪಿ ತಿರುಗೇಟು

04/12/2020

ಮಡಿಕೇರಿ ಡಿ.4 : ಪೊನ್ನಂಪೇಟೆ ತಾಲ್ಲೂಕು ಉದ್ಘಾಟನಾ ಸಮಾರಂಭವನ್ನು ನೆಪವಾಗಿರಿಸಿಕೊಂಡು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳು ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀಡಿದ ಹೇಳಿಕೆಯೇ ಹೊರತು ಈ ಟೀಕೆಗಳಲ್ಲಿ ಹುರುಳಿಲ್ಲವೆಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರ ಮಹೇಶ್ ಜೈನಿ ತಿರುಗೇಟು ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಜಿಲ್ಲೆಯಲ್ಲಿ ಕಾಂಗ್ರೆಸ್ ತುಘಲಕ್ ದರ್ಬಾರ್ ನಡೆಸಿದ್ದನ್ನು ಮರೆತಿರುವ ವೀಣಾಅಚ್ಚಯ್ಯ ಅವರು ವಿನಾಕಾರಣ ಬಿಜೆಪಿಯ ಜನಪರ ಕಾಳಜಿಯನ್ನು ಹಿಟ್ಲರ್ ಸಂಸ್ಕøತಿಗೆ ಹೋಲಿಸಿದ್ದು ಖಂಡನೀಯವೆಂದು ಹೇಳಿದ್ದಾರೆ.
ಮಡಿಕೇರಿ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಯೋಜನೆ ಅನುಷ್ಠಾನಕ್ಕೆ ಕಾರಣಕರ್ತರಾಗಿದ್ದ, ಜಿಲ್ಲೆಯ ಶಾಸಕರುಗಳನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸದೆ ಅಂದು ಉಸ್ತುವಾರಿ ಸಚಿವರಾಗಿದ್ದ ಸೀತಾರಾಮ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ತುಘಲಕ್ ದರ್ಬಾರ್ ನಡೆಸಿದ್ದರು ಎಂದು ಮಹೇಶ್ ಜೈನಿ ಆರೋಪಿಸಿದ್ದಾರೆ.
ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಹೀನಾಯ ಸ್ಥಿತಿಯಿಂದ ಹತಾಶಗೊಂಡಿರುವ ವಿಧಾನ ಪರಿಷತ್ ಸದಸ್ಯರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
ಪ್ರತ್ಯೇಕ ತಾಲ್ಲೂಕು ಹೋರಾಟವನ್ನು ಗಮನಿಸಿದರೆ ಪೊನ್ನಂಪೇಟೆಗೆ ಶೀಘ್ರ ಯಶಸ್ಸು ಸಿಕ್ಕಿದೆ. ಈ ಯಶಸ್ಸಿಗೆ ಕಾರಣಕರ್ತರಾದ ಎಲ್ಲಾ ಹಿರಿಯ, ಕಿರಿಯ ಹೋರಾಟಗಾರರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರೆಲ್ಲರೂ ಅಭಿನಂದನಾರ್ಹರು. ಕುಶಾಲನಗರ ತಾಲ್ಲೂಕು ಕೂಡ ಸಧ್ಯದಲ್ಲೇ ಉದ್ಘಾಟನೆಗೊಳ್ಳಲಿದ್ದು, ಎರಡೂ ನೂತನ ತಾಲ್ಲೂಕುಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಸರಿಯಲ್ಲವೆಂದು ಅವರು ತಿಳಿಸಿದ್ದಾರೆ.
ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಅಭಿವೃದ್ಧಿ ಪರ ಚಿಂತನೆ ನಡೆಸದೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಕ್ರಮ ಖಂಡನೀಯ. ನ.28 ರಂದು ಪತ್ರಿಕೆಗಳ ಮೂಲಕ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷರು, ಕಾಂಗ್ರೆಸ್ ನಾಯಕರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಸಿ.ಎಸ್.ಅರುಣ್ ಮಾಚಯ್ಯ ಅವರು ಎರಡು ದಶಕಗಳ ಹೋರಾಟ ಇತ್ಯರ್ಥಗೊಳ್ಳುತ್ತಿದೆ. ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಮತ್ತು ಗ್ರಾ.ಪಂ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ನೂತನ ತಾಲ್ಲೂಕು ಉದ್ಘಾಟನೆಯಾಗಬೇಕೆಂದು ಸ್ಪಷ್ಟಪಡಿಸಿದ್ದರು. ಸರಳ ಹಾಗೂ ತುರ್ತಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು.
ಅರುಣ್ ಮಾಚಯ್ಯ ಅವರು ಪತ್ರಿಕಾಗೋಷ್ಠಿ ನಡೆಸುವಾಗ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ನಾಗರೀಕ ಹೋರಾಟ ಸಮಿತಿಯ ಪೂಣಚ್ಚ, ಎಂ.ಟಿ.ಕಾರ್ಯಪ್ಪ ಮೊದಲಾದವರು ಹಾಜರಿದ್ದು, ಎಲ್ಲರನ್ನೂ ಆಹ್ವಾನಿಸುವ ಮೂಲಕ ಪಕ್ಷ ಭೇದ ಮರೆತು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ. ಆದರೆ ಈ ಬಗ್ಗೆ ಅರಿವಿಲ್ಲದ ವೀಣಾಅಚ್ಚಯ್ಯ ಅವರು ಉದ್ಘಾಟನಾ ಸಮಾರಂಭವನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಂಡಿದ್ದಾರೆ ಎಂದು ಮಹೇಶ್ ಜೈನಿ ಆರೋಪಿಸಿದ್ದಾರೆ.
::: ಸರ್ಕಾರದ ಸಾಧನೆಯನ್ನು ಬಿಜೆಪಿ ಹೇಳಿದೆ :::
ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದ್ದು, ಇದರಲ್ಲಿ ಪ್ರಚಾರ ಪ್ರಿಯತೆಯ ಉದ್ದೇಶವಿಲ್ಲ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ರಾಜಕೀಯ ಪಕ್ಷವಾಗಿ ಬಿಜೆಪಿಯ ಕರ್ತವ್ಯವೂ ಆಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಪೊನ್ನಂಪೇಟೆಯಲ್ಲಿ ನಡೆದ ಬಿಜೆಪಿ ಸಭೆಯ ಸಂದರ್ಭ ಪಕ್ಷದ ಧ್ವಜವನ್ನು ಕಾರ್ಯಕರ್ತರಿಗೆ ಸಭೆ ನಡೆಯುವ ಸ್ಥಳದ ಹಾದಿ ತೋರಿಸುವುದಕ್ಕಾಗಿ ಹಾಕಲಾಗಿತ್ತೇ ಹೊರತು ಜನರ ಹಾದಿ ತಪ್ಪಿಸುವುದಕ್ಕಾಗಿ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ.