ಜೀವಿಜಯರಿಂದ ಪುತ್ರ ವ್ಯಾಮೋಹದ ರಾಜಕೀಯ : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪ

December 4, 2020

ಮಡಿಕೇರಿ ಡಿ.4 : ಕಾಂಗ್ರೆಸ್ ಕಡೆ ಮುಖ ಮಾಡಿರುವ ಮಾಜಿ ಸಚಿವ ಬಿ.ಎ.ಜೀವಿಜಯ ಅವರು ನೇರವಾಗಿ ಜೆಡಿಎಸ್ ತೊರೆಯದೆ ವಿನಾಕಾರಣ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷ ಬಿಡಲು ಸಿದ್ಧವಿರುವ ಹುಳಗಳು ಮೊದಲು ಪಕ್ಷ ಬಿಡಲಿ ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧತೆ ನಡೆಸಿರುವ ಜೀವಿಜಯ ಅವರು ಜೆಡಿಎಸ್ ಅಸ್ತಿತ್ವಕ್ಕೆ ದಕ್ಕೆ ತರುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು. ತಮ್ಮ ಪುತ್ರನ ರಾಜಕೀಯ ಭವಿಷ್ಯವವನ್ನು ಉಜ್ವಲಗೊಳಿಸುವುದಕ್ಕಾಗಿ ಕಾಂಗ್ರೆಸ್ ಕಡೆಗೆ ಮುಖ ಮಾಡಿರುವ ಜೀವಿಜಯರಿಂದ ಆ ಪಕ್ಷಕ್ಕೆ ನಷ್ಟವೇ ಹೊರತು ಲಾಭವೇನಿಲ್ಲ, ಅದೇ ರೀತಿ ಕಾಂಗ್ರೆಸ್ ಪಕ್ಷ ಜೀವಿಜಯ ಅವರಿಗೆ ಮೋಸ ಮಾಡಲೆಂದೇ ತನ್ನತ್ತ ಸೆಳೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಪುತ್ರ ವ್ಯಾಮೋಹದ ರಾಜಕಾರಣಿಗಳ ಮಾತು ಕೇಳಿ ಜೆಡಿಎಸ್ ಕಾರ್ಯಕರ್ತರು ತಮ್ಮ ರಾಜಕೀಯ ಭವಿಷ್ಯವವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ ಅವರು, ಯಾರೊಬ್ಬರೂ ಜೀವಿಜಯರ ಹಿಂದೆ ಹೋಗುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷ ಬಿಜೆಪಿ ಸ್ನೇಹ ಮಾಡಿದೆ, ಆ ಕಾರಣಕ್ಕಾಗಿ ನಾನು ಪಕ್ಷ ಬಿಡುತ್ತಿದ್ದೇನೆ ಎಂದು ಜೀವಿಜಯ ಅವರು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಜೆಡಿಎಸ್ ಜಾತ್ಯತೀತ ನಿಲುವಿನ ಪ್ರಾದೇಶಿಕ ಪಕ್ಷವಾಗಿದ್ದು, ಬಿಜೆಪಿ ಅಥವಾ ಕಾಂಗ್ರೆಸ್ ನ “ಬಿ” ಟೀಮ್ ಅಲ್ಲವೆಂದು ಸ್ಪಷ್ಟಪಡಿಸಿದರು.
ತಮ್ಮ ರಾಜಕೀಯ ಜೀವನದಲ್ಲಿ 11 ಬಾರಿ ಚುನಾವಣೆಯನ್ನು ಎದುರಿಸಿ ಕೇವಲ ಎರಡು ಬಾರಿ ಮಾತ್ರ ಗೆಲುವು ಕಂಡಿರುವ ಜೀವಿಜಯ ಅವರಿಗೆ ಜನಬೆಂಬಲವಿಲ್ಲ. ಮತ್ತೊಂದೆಡೆ ನಿಷ್ಕ್ರಿಯವಾಗಿರುವ ಕಾಂಗ್ರೆಸ್ ಪಕ್ಷ ನಾಯಕರ ಕೊರತೆಯನ್ನು ಎದುರಿಸುತ್ತಿದೆ. ಮನೆಯೊಂದು ನೂರು ಬಾಗಿಲಾಗಿರುವ ಕಾಂಗ್ರೆಸ್‍ಗೆ ಜೀವಿಜಯ ಅವರು ನೂರ ಒಂದನೇ ಬಾಗಿಲು ಎಂದು ಗಣೇಶ್ ವ್ಯಂಗ್ಯವಾಡಿದರು.
ಸುಮಾರು 14 ತಿಂಗಳುಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಸೇವೆ ಮಾಡಿದ ಕುಮಾರಸ್ವಾಮಿ ಅವರ ಸೇವೆಯನ್ನು ಕೊಡಗಿನ ಜನ ಎಂದಿಗೂ ಮರೆಯುವುದಿಲ್ಲ. ಕುಮಾರಸ್ವಾಮಿ ಅವರ ಘನತೆ ಏನು ಎನ್ನುವುದು ಜಿಲ್ಲೆಯ ಜನತೆಗೆ ತಿಳಿದಿದೆ. ಜೀವಿಜಯ ಅವರ ಅಪಪ್ರಚಾರದಿಂದ ಯಾವುದೇ ದಕ್ಕೆಯಾಗುವುದಿಲ್ಲವೆಂದು ಅವರು ತಿಳಿಸಿದರು.
ಕುಶಾಲನಗರ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಜೆಡಿಎಸ್ ನಾಯಕರು ಬಿಜೆಪಿ ಪರ ಇದ್ದರು ಎಂದು ಜೀವಿಜಯ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸ್ವತ: ಜೀವಿಜಯ ಅವರೇ ತಮ್ಮ ಮನೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ನೀಡಿದ ಸಲಹೆಯ ವಿಡಿಯೋ ದೃಶ್ಯಾವಳಿ ನಮ್ಮ ಬಳಿ ಇದ್ದು, ಸಕಾಲದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು.
ಜೆಡಿಎಸ್ ತೊರೆಯುವ ಹುಳಗಳೆಲ್ಲ ತೊರೆಯಲಿ, ಅದು ಬಿಟ್ಟು ಪಕ್ಷದಲ್ಲಿದ್ದುಕೊಂಡೇ ಮನೆ ಹಾಳು ಮಾಡುವ ಕೆಲಸ ಮಾಡಿದರೆ ಅವರು ಯಾರೇ ಆಗಿದ್ದರೂ ಅಮಾನತು ಮಾಡುವುದಾಗಿ ಗಣೇಶ್ ಎಚ್ಚರಿಕೆ ನೀಡಿದರು.
ಅಲ್ಪಸಂಖ್ಯಾತರ ಯಾವುದೇ ನೋವುಗಳಿಗೆ ಸ್ಪಂದಿಸದ ಜೀವಿಜಯ ಅವರಿಗೆ ಇದೀಗ ದಿಢೀರ್ ಆಗಿ ಕಾಂಗ್ರೆಸ್ ಸೇರ್ಪಡೆ ಹೊತ್ತಿನಲ್ಲಿ ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ಬಂದಿದೆ ಎಂದು ಟೀಕಿಸಿದ ಅವರು, ಕೆಲವು ವರ್ಷಗಳ ಹಿಂದೆ ತಮ್ಮ ಮನೆಯ ಪಕ್ಕದ ಮಸೀದಿಯಲ್ಲೇ ಖುರಾನ್ ನ್ನು ದಹಿಸಿದಾಗ ಸಾಂತ್ವನ ಹೇಳುವ ಮನಸ್ಸು ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು.
::: 40 ಪಂಚಾಯಿತಿ ನಮ್ಮದು :::
ಗ್ರಾ.ಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿದೆ. ಚುನಾವಣೆಯಲ್ಲಿ 101 ಪಂಚಾಯಿತಿಗಳ ಪೈಕಿ ಸುಮಾರು 40 ಪಂಚಾಯಿತಿಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರಕ್ಕೆ ಬರಲಿದ್ದಾರೆ ಎಂದು ಗಣೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹೆಚ್.ಆರ್.ಸುರೇಶ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಳೆಹಾನಿ ಸಂತ್ರಸ್ತರಿಗಾಗಿ 800 ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು. ರೈತರು ಹಾಗೂ ಕಾರ್ಮಿಕರ ಪರವಾಗಿರುವ ಜೆಡಿಎಸ್ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ಹಿರಿಯ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್ ಮಾತನಾಡಿ ಜೆಡಿಎಸ್ ಜಾತ್ಯತೀತ ಸಿದ್ಧಾಂತದ ಪಕ್ಷವಾಗಿದ್ದು, ಜಾತಿ ಆಧಾರಿತ ಅಥವಾ ಹಿಂಬಾಲಕರ ಪಕ್ಷವಲ್ಲವೆಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಪಕ್ಷ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಕಾರ್ಯಕರ್ತರು ಅತಿ ಉತ್ಸಾಹದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎ.ಯೂಸುಫ್, ಪ್ರಧಾನ ಕಾರ್ಯದರ್ಶಿ ಮುಳ್ಳುಸೋಗೆ ರಾಜೇಶ್ ಹಾಗೂ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎ.ಜಿ.ವಿಜಯ ಉಪಸ್ಥಿತರಿದ್ದರು.

error: Content is protected !!