ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಗಣಪತಿ ರಥೋತ್ಸವ

December 4, 2020

ಕುಶಾಲನಗರ ಡಿ. 4 : ಕುಶಾಲನಗರ ಗಣಪತಿ ದೇವಾಲಯ 100ನೇ ವರ್ಷದ ಜಾತ್ರೆ ಅಂಗವಾಗಿ ನಡೆದ ರಥೋತ್ಸವ ಸರಳವಾಗಿ ನಡೆಯಿತು.
ಮುಂಜಾನೆ ಸಾಂಕೇತಿಕವಾಗಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ಕೆಲವೇ ಸಂಖ್ಯೆ ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ರಥೋತ್ಸವ ಹಿನ್ನಲೆಯಲ್ಲಿ ಪ್ರಧಾನ ಅರ್ಚಕರಾದ ಆರ್.ಕೆ.ನಾಗೇಂದ್ರ ಅವರ ನೇತೃತ್ವದಲ್ಲಿ ಮುಖ್ಯ ಅರ್ಚಕರಾದ ರಾಘವೇಂದ್ರ ಭಟ್ ನೇತೃತ್ವದ ತಂಡ ಮುಂಜಾನೆಯಿಂದ ಪೂಜೆ ಪುನಸ್ಕಾರ ನಡೆಸಿದರು.
ದೇವಾಲಯದಿಂದ ರಥಬೀದಿ ಮೂಲಕ ತೆರಳಿದ ರಥ ಆಂಜನೇಯ ದೇವಾಲಯ ತನಕ ಎಳೆದ ಭಕ್ತಾದಿಗಳು ನಂತರ ದೇವಾಲಯದ ಆವರಣಕ್ಕೆ ಎಳೆದು ತಂದರು. ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ ಅವರುಗಳು ಉತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ರಂಜನ್, ಸಾಂಪ್ರದಾಯಿಕ ಪೂಜೆಯೊಂದಿಗೆ ಸರಳವಾಗಿ ರಥೋತ್ಸವ ಜರುಗಿದ್ದು ಮಹಾಮಾರಿ ಕೊರೊನ ತೊಲಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
100ನೇ ವರ್ಷದ ಅಂಗವಾಗಿ ಅದ್ದೂರಿಯಾಗಿ ರಥೋತ್ಸವ ಸಂಭ್ರಮಾಚರಣೆ ನಡೆಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದಲೇ ಕೆಲವು ತಯಾರಿ ನಡೆಸಲಾಗಿತ್ತು. ಆದರೆ ಕೊರೊನ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಸರಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದರೊಂದಿಗೆ ಸಾಂಪ್ರದಾಯಿಕವಾಗಿ ಸರಳ ರಥೋತ್ಸವ ನಡೆದಿದೆ ಎಂದು ದೇವಾಲಯದ ಸೇವಾ ಸಮಿತಿ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್ ಹೇಳಿದರು.
ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಸ್ಥಳದಲ್ಲಿ ಉಪಸ್ಥಿತರಿದ್ದು ಯಾವುದೇ ರೀತಿಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡದಂತೆ ವಿನಂತಿಸಿದರು. ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಸುಸೂತ್ರವಾಗಿ ರಥೋತ್ಸವ ನಡೆದ ಹಿನ್ನಲೆಯಲ್ಲಿ ತಹಶೀಲ್ದಾರ್ ಅವರು ಆಡಳಿತ ಮಂಡಳಿ ಮತ್ತು ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಗಣೇಶ್ ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೇ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜೈವರ್ಧನ್, ಸಮಿತಿ ಉಪಾಧ್ಯಕ್ಷ ಆರ್.ಬಾಬು, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸರಾವ್, ಖಜಾಂಚಿ ಎಂ.ಕೆ.ದಿನೇಶ್, ಸಹ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ನಿರ್ದೇಶಕರಾದ ವಿ.ಪಿ.ಶಶಿಧರ್, ಜಿ.ಎಲ್.ನಾಗರಾಜ್, ಎಂ.ವಿ.ನಾರಾಯಣ್, ವಿಶೇಷ ಆಹ್ವಾನಿತರಾದ ವಿ.ಡಿ.ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಬಿ.ಅಪ್ಪಣ್ಣ, ಡಿ.ಸಿ.ಜಗದೀಶ್, ಕೆ.ಎಲ್.ಸುರೇಶ್, ಪಪಂ ಪ್ರತಿನಿಧಿಗಳು ಮತ್ತು ಸ್ಥಳೀಯ ದೇವಾಲಯಗಳ ಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು ಇದ್ದರು.

error: Content is protected !!