ಚುನಾವಣಾ ಪೂರ್ವ ಸಿದ್ಧತಾ ಸಭೆ : ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ : ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಕರೆ

04/12/2020

ಮಡಿಕೇರಿ ಡಿ. 4 : ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಚುನಾವಣಾ ಪೂರ್ವ ಸಿದ್ಧತಾ ಸಭೆ ನಡೆಸಿತು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಗ್ರಾ.ಪಂ ಚುನಾವಣೆ ಪಕ್ಷದ ಗೆಲುವಿಗೆ ಮುಖ್ಯ ಘಟ್ಟವಾಗಿದ್ದು, ನಾಯಕರ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು. ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ನೀಡುವಂತಾಗಬೇಕು ಎಂದರು.
ಕಾರ್ಯಕರ್ತರು ಬೆಳೆದರೆ ಪಕ್ಷ ಗೆದ್ದಂತೆ ಎಂದ ಅವರು ಜೆಡಿಎಸ್ ಪಕ್ಷ ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲವೆಂದು ತಿಳಿಸಿದರು. ಕಾರ್ಯಕರ್ತರು ಜನಪರ ಕಾಳಜಿಯೊಂದಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನಿರಂತರ ಒಡನಾಟ ಬೆಳೆಸಿಕೊಂಡಾಗ ಮಾತ್ರ ಪಕ್ಷ ತನ್ನಿಂದ ತಾನೇ ಬೆಳವಣಿಗೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್ ಪಕ್ಷ ಯುವ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿ ಸಮರ್ಥ ನಾಯಕರನ್ನಾಗಿ ಬೆಳೆಸುತ್ತಿದೆ. ಬಿಜೆಪಿಯಲ್ಲಿ ಪ್ರಸ್ತುತ ಜೆಡಿಎಸ್‍ನ ಕಾರ್ಯಕರ್ತರೇ ನಾಯಕರಾಗಿ ಬೆಳವಣಿಗೆಯನ್ನು ಕಂಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ತಮ್ಮ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದು, ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ದೂರಿದರು.
ಜೀವಿಜಯ ಅವರು ಜೆಡಿಎಸ್ ಪಕ್ಷ ತೊರೆಯುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಜೆಡಿಎಸ್ ಪಕ್ಷದ ಮುಖಂಡರಾದ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಅವರಂತಹ ದೊಡ್ಡ ದೊಡ್ಡ ನಾಯಕರು ಪಕ್ಷದಲ್ಲಿರುವಾಗ ಯಾವ ಭಯವೂ ಇಲ್ಲ. ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಯುವ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಸದೃಢಗೊಳಿಸಲಾಗುವುದು ಎಂದರು.
ಹಿರಿಯ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್ ಮಾತನಾಡಿ, ತಳಮಟ್ಟದಿಂದಲೇ ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಮೂಲಕ ಜಿಲ್ಲಾಧ್ಯಕ್ಷರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಕಟ್ಟಬೇಕೆಂದು ಕರೆ ನೀಡಿದರು.
ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಹೆಚ್.ಆರ್.ಸುರೇಶ್ ಮಾತನಾಡಿ, ಜೀವಿಜಯ ಅವರು ಜೆಡಿಎಸ್ ತೊರೆದರೆ ಯಾವುದೇ ನಷ್ಟವಿಲ್ಲವೆಂದರು.
ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ಯುವ ಜೆಡಿಎಸ್ ಕಾರ್ಯಕರ್ತರು ಪಕ್ಷದ ಏಳಿಗೆಗೆ ಸದಾ ಶ್ರಮಿಸಲಿದ್ದಾರೆ. ಮತ್ತಷ್ಟು ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಿದ್ದೇವೆ. ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರಿಗೆ ಒತ್ತು ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಮನೋಜ್ ಬೋಪಯ್ಯ, ಎಂ.ಎಂ. ಷರೀಫ್, ಯೂಸುಫ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಮಡಿಕೇರಿ ತಾಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ಮಹಿಳಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷೆ ಎಂ. ಎ. ರುಬೀನಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಪಾಷಾ, ಕಾರ್ಯದರ್ಶಿ ಎನ್. ಸಿ. ಸುನಿಲ್, ಖಜಾಂಚಿ ಡೆನ್ನಿ ಬರೋಸ್, ನಗರ ಅಧ್ಯಕ್ಷ ಖಲೀಲ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ನಾಗರಾಜ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್, ಯುವ ಘಟಕ ಪ್ರಧಾನ ಕಾರ್ಯದರ್ಶಿ ಜಾಶೀರ್, ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಹಿರಿಯ ಉಪಾಧ್ಯಕ್ಷ ಬೋಜಪ್ಪ, ಎಸ್.ಸಿ ಘಟಕ ಅಧ್ಯಕ್ಷ ರವಿಕುಮಾರ್, ಮಹಿಳಾ ನಗರ ಅಧ್ಯಕ್ಷ ಸುನಂದಾ, ವಿರಾಜಪೇಟೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜಿದ್, ಮಡಿಕೇರಿ ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಶೀರ್, ಕುಶಾಲನಗರ ಅಲ್ಪಸಂಖ್ಯಾತರ ಘಕದ ಅಧ್ಯಕ್ಷ ಕರೀಂ, ಸಾಮಾಜಿಕ ಜಾಲತಾಣ ಅಧ್ಯಕ್ಷ ಸೈಫ್ ಹಾಗೂ ಪ್ರಮುಖರಾದ ಜಿನಸ್, ಹನೀಫ್, ಕೌಶಿಕ್, ಶಬೀರ್, ಶಿವದಾಸ್, ಜಯಮ್ಮ, ಪರ್ಮಲೆ ಗಣೇಶ್, ಪಾಪಣ್ಣ, ವಿಜಯ, ಇಬ್ರಾಹಿಂ, ಯಮುನಾ ಹಾಜರಿದ್ದರು.