ಮುಷ್ಕರ ನಿರತ ರೈತರಿಗೆ ಬೆಂಬಲ : ಮಡಿಕೇರಿಯಲ್ಲಿ ಪ್ರತಿಭಟನೆ

December 4, 2020

ಮಡಿಕೇರಿ ಡಿ.4 : ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ರ್ಸ್‍ವಾದಿ) ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು ಕೇಂದ್ರ ಸರಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕೃಷಿ ವಿರೋಧಿ ಕಾಯಿದೆಗಳನ್ನು ತಕ್ಷಣವೇ ಹಿಂಪಡೆಯಬೇಕು, ದೆಹಲಿಯಲ್ಲಿ ರೈತರ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯಗಳನ್ನು ಕೊನೆಗೊಳಿಸಬೇಕು ಮತ್ತು ರೈತರ ನ್ಯಾಯಯುತ ಬೇಡಿಕೆಗಳನ್ನು ಬೇಷರತ್ ಆಗಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಕೃಷಿ ಕಾಯಿದೆಯನ್ನು ಜಾರಿಗೆ ತಂದಿದ್ದು, ರೈತರ ಪಾಲಿಗೆ ಇದು ಮರಣ ಶಾಸನವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಫ್ಯಾಸಿಸ್ಟ್ ಸರಕಾರ ಆಡಳಿತ ನಡೆಸುತ್ತಿದ್ದು ಇದು ರೈತರು, ಕೃಷಿಕರ ವಿರೋಧಿಯಾಗಿದೆ. ಹೋರಾಟದ ಸಂದರ್ಭ ಮೃತಪಟ್ಟ ಎಲ್ಲಾ ರೈತ ಹೋರಾಟಗಾರರಿಗೂ ಕೆಂಪು ವಂದನೆ ಸಲ್ಲಿಸುವುದಾಗಿ ಘೋಷಿಸಿದ ಪ್ರತಿಭಟನಾಕಾರರು, ಕೊಡಗು ಜಿಲ್ಲೆಯಲ್ಲೂ ರೈತ ಪರ ಹೋರಾಟಗಳು ಮೊಳಗಬೇಕು. ರೈತರ ಬೇಡಿಕೆಗಳು ಯಥಾಪ್ರಕಾರ ಜಾರಿಯಾಗಬೇಕು ಎಂದು ಒತ್ತಾಯಿಸಿದರು. ಬಳಿಕ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷ( ಮಾಕ್ರ್ಸ್‍ವಾದ) ಕೊಡಗು ಜಿಲ್ಲಾ ಸಂಚಾಲಕರಾದ ಐ.ಆರ್. ದುರ್ಗಾ ಪ್ರಸಾದ್ ನೇತೃತ್ವದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪ್ರಮುಖರಾದ ಮಹದೇವ, ಸಾಬು, ಎನ್.ಡಿ. ಕುಟ್ಟಪ್ಪ, ಸಾಜಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!