ಮಡಿಕೇರಿ ಖಾಸಗಿ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆಗಳ ದರ್ಬಾರ್ : 5 ಕೋಟಿ ರೂ. ನೀರಿನಲ್ಲಿ ಹೋಮ

05/12/2020

ಮಡಿಕೇರಿ ಡಿ.5 : (NEWS DESK )ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣ ಇಂದು ಹೈಟೆಕ್ ವ್ಯವಸ್ಥೆಗಳೊಂದಿಗೆ ಜಿಲ್ಲೆಯ ಇತರ ಬಸ್ ನಿಲ್ದಾಣಗಳಿಗೆ ಮಾದರಿಯಾಗಬೇಕಾಗಿತ್ತು. ಆದರೆ ಇಂದು ಈ ಬಸ್ ನಿಲ್ದಾಣದ ಸ್ವರೂಪವನ್ನು ಗಮನಿಸಿದರೆ ಸುಮಾರು 20 ವರ್ಷಗಳಷ್ಟು ಹಳೆಯದಾದ ನಿಲ್ದಾಣದಂತೆ ಗೋಚರಿಸುತ್ತಿದೆ.
ಜಿಲ್ಲೆಯ ಶಾಸಕರುಗಳ ಸತತ ಪ್ರಯತ್ನದ ಫಲವಾಗಿ ನಗರದ ರೇಸ್ ಕೋರ್ಸ್ ರಸ್ತೆ ಬಳಿಯ ಕೃಷಿ ಸಂಶೋಧನಾ ಕೇಂದ್ರದ ಜಮೀನು ನಗರಸಭೆಯ ಪಾಲಾಗಿ ನೂತನ ಖಾಸಗಿ ಬಸ್ ನಿಲ್ದಾಣದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಸುಮಾರು 5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ ಪ್ರಸ್ತುತ ಬಸ್ ನಿಲ್ದಾಣದ ಪರಿಸ್ಥಿತಿಯನ್ನು ಗಮನಿಸಿದರೆ ಇಷ್ಟೊಂದು ಹಣ ಇದರ ಕಾಮಗಾರಿಗೆ ಖರ್ಚಾಗಿದೆಯೇ ಎನ್ನುವ ಸಂಶಯ ಮೂಡುತ್ತದೆ.
ಈ ಕಟ್ಟಡಕ್ಕೆ ಎಲ್ಲೂ ವೈಜ್ಞಾನಿಕ ಸ್ಪರ್ಷವಿಲ್ಲ, ನವನವೀನತೆಯ ಮೆರುಗು ಇಲ್ಲ. ಪ್ರಯಾಣಿಕರಿಗೆ ಯಾವುದೇ ಅನುಕೂಲತೆಗಳಿಲ್ಲ, ಸುಸಜ್ಜಿತ ಆಸನ ಮತ್ತು ಮೂಲಭೂತ ಸೌಲಭ್ಯಗಳಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳು ಇಲ್ಲಿ ದೊರೆಯುತ್ತದೆ. ಬಸ್ ನಿಲ್ದಾಣದ ಆವರಣ ಸಂಪೂರ್ಣ ಧೂಳುಮಯವಾಗಿದ್ದು, ನಗರಸಭಾ ವ್ಯಾಪ್ತಿಗೆ ಯೋಗ್ಯವೆನಿಸುವ ವ್ಯವಸ್ಥೆ ಈ ನಿಲ್ದಾಣದಲ್ಲಿಲ್ಲ.
::: ಎಲ್ಲವನ್ನೂ ಹಾಳು ಮಾಡಲಾಗಿದೆ :::
ಬಸ್ ನಿಲ್ದಾಣ ನಿರ್ಮಾಣಗೊಂಡು ಮೂರು ವರ್ಷ ಭರ್ತಿಯಾಗುವ ಮೊದಲೇ ನಿಲ್ದಾಣದಲ್ಲಿರುವ ಎಲ್ಲಾ ವ್ಯವಸ್ಥೆಗಳನ್ನು ಹಾಳು ಮಾಡಲಾಗಿದೆ. ಶೌಚಾಲಯದಲ್ಲಿನ ಎಲ್ಲಾ ಪೈಪ್ ಗಳನ್ನು ಮುರಿದು ಹಾಕಲಾಗಿದ್ದು, ನೀರಿನ ಕೊರತೆಯಿಂದ ಅಶುಚಿತ್ವದ ವಾತಾವರಣ ಮೂಡಿದೆ. ವಿದ್ಯುತ್ ಸಂಪರ್ಕಗಳು ಹಾಳಾಗಿದ್ದು, ಬಲ್ಬ್ ಗಳು ನಾಪತ್ತೆಯಾಗಿವೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮೊದಲೇ ಇಲ್ಲದಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ತುಂಬಿ ಹೋಗಿದೆ. ಸುತ್ತಲೂ ಕುರುಚಲು ಕಾಡು ಬೆಳೆದು ಅಸುರಕ್ಷಿತ ಪರಿಸರ ನಿರ್ಮಾಣವಾಗಿದೆ. ನಿಲ್ದಾಣದ ಆವರಣದಲ್ಲಿ ನಡೆದಿರುವ ಕಾಂಕ್ರಿಟ್ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ಎಲ್ಲವೂ ಕಿತ್ತು ಬಂದು ಧೂಳುಮಯವಾಗಿದೆ.
ಕೋವಿಡ್ ಪರಿಸ್ಥಿತಿಯ ಹಿನ್ನೆಲೆ ಖಾಸಗಿ ಬಸ್ ಗಳ ಸಂಚಾರ ಕ್ಷೀಣಗೊಂಡಿರುವುದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಒಂದು ವೇಳೆ ಪ್ರಯಾಣಿಕರ ಸಂಚಾರ ಹೆಚ್ಚಾಗಿದ್ದಿದ್ದರೆ ಬಸ್ ನಿಲ್ದಾಣ ಮತ್ತಷ್ಟು ಹದಗೆಡುತ್ತಿತ್ತು. ಪ್ರಸ್ತುತ ಶುದ್ಧ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿರುವುದರಿಂದ ಬಸ್ ಗಳ ಸಿಬ್ಬಂದಿಗಳು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣವೇ ಅವೈಜ್ಞಾನಿಕವಾಗಿರುವುದರಿಂದ ಬಸ್ ಗಳ ನಿಲುಗಡೆ ವ್ಯವಸ್ಥೆಯೂ ಸಮರ್ಪಕವಾಗಿ ಆಗುತ್ತಿಲ್ಲ.
ಬಸ್ ಗಳು ಮಾತ್ರವಲ್ಲದೆ ಖಾಸಗಿ ವಾಹನಗಳ ನಿಲುಗಡೆ ಸ್ಥಳವಾಗಿಯೂ ಬಸ್ ನಿಲ್ದಾಣ ಮಾರ್ಪಾಡುಗೊಂಡಿದೆ. ರಾತ್ರಿ ವೇಳೆ ಪಾನಮತ್ತರು ಮತ್ತು ಕಿಡಿಗೇಡಿಗಳಿಗೆ ಈ ನಿಲ್ದಾಣ ಆಶ್ರಯತಾಣವಾಗಿದೆ. ಸುರಕ್ಷತೆ ಹಾಗೂ ನಿರ್ವಹಣೆಯ ಕೊರತೆಯಿಂದ ಬಳಲುತ್ತಿರುವ ಖಾಸಗಿ ಬಸ್ ನಿಲ್ದಾಣ ನಗರಸಭೆಯ ನಿರ್ಲಕ್ಷ್ಯದಿಂದ ಅನಾಥ ಪ್ರಜ್ಞೆಯನ್ನು ಎದುರಿಸುತ್ತಿದೆ.
::: ಮಳಿಗೆಗಳು ಅನಾಥ :::
ಬಸ್ ನಿಲ್ದಾಣದಲ್ಲಿ ಕೆಲವು ಮಳಿಗೆಗಳ ನಿರ್ಮಾಣವೂ ಆಗಿದೆ, ಆದರೆ ಈ ಮಳಿಗೆಗಳನ್ನು ಇಲ್ಲಿಯವರೆಗೆ ವ್ಯಾಪಾರಕ್ಕೆಂದು ಬಿಟ್ಟುಕೊಟ್ಟಿಲ್ಲ. ಕಾನೂನಾತ್ಮಕವಾಗಿ ಹರಾಜು ಪ್ರಕ್ರಿಯೆ ನಡೆಸಿದ್ದರೆ ನಗರಸಭೆಗೆ ಒಂದಿಷ್ಟು ಆದಾಯವಾದರೂ ಬರುತ್ತಿತ್ತು. ಯಾವುದನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿರುವುದರಿಂದ ನೂತನ ಖಾಸಗಿ ಬಸ್ ನಿಲ್ದಾಣದ ಮೂಲ ಉದ್ದೇಶವೇ ವಿಫಲವಾದಂತ್ತಾಗಿದೆ. ನಗರದ ಹೃದಯ ಭಾಗದ ಜಮೀನೊಂದು ಹೈಟೆಕ್ ಯೋಜನೆಯೊಂದಿಗೆ ಖಾಸಗಿ ಬಸ್ ಮಾಲೀಕರು, ಸಿಬ್ಬಂದಿಗಳು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಬದಲಿಗೆ ಯೋಜನೆಯ ನೆಪದಲ್ಲಿ ದುರುಪಯೋಗಕ್ಕೆ ಹಾದಿ ಸುಗಮ ಮಾಡಿಕೊಟ್ಟದ್ದು ಮಾತ್ರ ದುರಂತ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಿವ್ಯ ಮೌನದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸಾರ್ವಜನಿಕರು ನಿಲ್ದಾಣದ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಬೇಕು, ಶುಚಿತ್ವವನ್ನು ಕಾಪಾಡಬೇಕು ಮತ್ತು ಪ್ರತಿದಿನ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.