ಸೋಮವಾರಪೇಟೆ ಪ.ಪಂ ಸಾಮಾನ್ಯ ಸಭೆ : ಪ.ಪಂ ಯನ್ನು ಮೇಲ್ದರ್ಜೆಗೇರಿಸಲು ಶಾಸಕ ಅಪ್ಪಚ್ಚು ರಂಜನ್ ಸಲಹೆ

05/12/2020

ಮಡಿಕೇರಿ ಡಿ. 5 : ಸೋಮವಾರಪೇಟೆ ಪ.ಪಂ ಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಸಿಗಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಪ.ಪಂ ಅಧ್ಯಕ್ಷರಾದ ನಳಿನಿಗಣೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕರು ಈ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿದರು.
ಚೌಡ್ಲು, ಹಾನಗಲ್ಲು, ಬೇಳೂರು ಗ್ರಾ.ಪಂ. ಯ ಕೆಲ ಪ್ರದೇಶಗಳನ್ನು ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಂಡರೆ ಹೆಚ್ಚಿನ ಪ್ರಗತಿಯನ್ನು ನಿರೀಕ್ಷಿಸಬಹುದು. ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಡತ ಸಿದ್ದಪಡಿಸಿ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿದರೆ, ಸರ್ಕಾರದೊಂದಿಗೆ ವ್ಯವಹರಿಸಲಾಗುವುದು ಎಂದು ಹೇಳಿದರು.
ಪಟ್ಟಣದಲ್ಲಿ ಕಸವಿಲೇವಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಹೇಳಿದರು.
ಕಡಿಮೆ ದರಕ್ಕೆ ಟೆಂಡರ್ ಹಾಕಿ, ನಂತರ ಕಳಪೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಬಿ.ಸಂಜೀವ ಹೇಳಿದರು.
ಕೆಲ ಗುತ್ತಿಗೆದಾರರು ಟೆಂಡರ್‍ನಲ್ಲಿ ಶೇ.15, 20, 30ರಷ್ಟು ಕಡಿಮೆ ದರಕ್ಕೆ ಟೆಂಡರ್ ಹಾಕುತ್ತಾರೆ. ನಂತರ ಕಳಪೆ ಕಾಮಗಾರಿ ನಡೆಸುತ್ತಾರೆ. ಇಂಜಿನಿಯರ್‍ಗಳು ಸ್ಥಳದಲ್ಲಿ ಹಾಜರಿದ್ದು, ಕಾಮಗಾರಿ ಉಸ್ತುವಾರಿ ವಹಿಸುತ್ತಿಲ್ಲ ಎಂದು ದೂರಿದರು. ಅಂತಹ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿ ನೀಡಬಾರದು. ಕಾನೂನು ಕ್ರಮಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೇ ಕಾಮಗಾರಿಯನ್ನು ಇನ್ನೊಬ್ಬರು ನಿರ್ವಹಿಸಲು ಪಂಚಾಯಿತಿ ಅವಕಾಶ ಮಾಡಿಕೊಡಬೇಕು. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಎಷ್ಟೋ ಕಾಮಗಾರಿಗಳು ನಡೆದಿಲ್ಲ ಎಂದು ಸದಸ್ಯ ಜೀವನ್ ಸಭೆಯ ಗಮನಕ್ಕೆ ತಂದರು
ಪಂಚಾಯಿತಿ ಅನುಮತಿ ಪಡೆಯದೆ ಪಟ್ಟಣ ವ್ಯಾಪ್ತಿಯ ರಸ್ತೆ ಪಕ್ಕದಲ್ಲೇ ಕಂಬಗಳನ್ನು ನೆಟ್ಟಿದ್ದಾರೆ. ವಾಹನಗಳು ಡಿಕ್ಕಿಯಾದರೆ, ಮಾಲೀಕರಿಂದ ನಷ್ಟವನ್ನು ವಸೂಲಿ ಮಾಡುತ್ತಾರೆ. ಅವೈಜ್ಞಾನಿಕವಾಗಿ ಹಾಕಿರುವ ಕಂಬಗಳನ್ನು ತೆರವುಗೊಳಿಸುವಂತೆ ಸೆಸ್ಕ್‍ಗೆ ನೋಟಿಸ್ ಮಾಡುವಂತೆ ಸದಸ್ಯ ಎಸ್.ಮಹೇಶ್ ಹೇಳಿದರು. ನೋಟಿಸ್ ಜಾರಿಗೊಳಿಸುವಂತೆ ಶಾಸಕರು ಸೂಚಿಸಿದರು.
ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು. ನೀರೆತ್ತುವ ಯಂತ್ರಗಳ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಅಧ್ಯಕ್ಷೆ ನಳಿನಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿಯ ಹದ್ದುಬಸ್ತು ಗುರುತಿಸಲು ಕ್ರಮಕೈಗೊಳ್ಳಬೇಕು. ಕೆಲವರು ಪಂಚಾಯಿತಿ ಆಸ್ತಿಯನ್ನು ಲಪಟಾಯಿಸಿ ದಾಖಲಾತಿಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಸದಸ್ಯ ಎಸ್.ಆರ್.ಸೋಮೇಶ್ ಹೇಳಿದರು.
ಸಿ.ಕೆ.ಸುಬ್ಬಯ್ಯ ರಸ್ತೆಯ ಕೊನೆಯಲ್ಲಿ ರಸ್ತೆ ಕಿರಿದಾಗಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಪಂಚಾಯಿತಿ ಕೆಲ ಹಳೆ ಮಳಿಗೆಗಳನ್ನು ತೆಗೆದು ರಸ್ತೆ ವಿಸ್ತರಿಸಬೇಕು ಎಂದು ಬಿ.ಆರ್.ಮಹೇಶ್ ಹೇಳಿದರು.
ರಾಜ್ಯ ಹೆದ್ದಾರಿ ನಿರ್ಮಿಸಲು ಮಡಿಕೇರಿ ರಸ್ತೆ ಅಗಲೀಕರಣಗೊಂಡರೆ ರಸ್ತೆ ವಿಸ್ತರವಾಗಲಿದೆ. ಈಗ ವಿಸ್ತರಣೆಯ ಅಗತ್ಯವಿಲ್ಲ ಎಂದು ಸದಸ್ಯರಾದ ಶೀಲಾ ಡಿಸೋಜ, ಜಯಂತಿ ಶಿವಕುಮಾರ್, ಸಂಜೀವ ಹೇಳಿದರು. ಸದಸ್ಯರೆಲ್ಲರೂ ಸ್ಥಳಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು.
ಮಾರುಕಟ್ಟೆ ಆವರಣದಲ್ಲಿ ಕೆಲವರು ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಅಂತಹ ಕಟ್ಟಡವನ್ನು ತೆರವುಗೊಳಿಸಬೇಕೆಂದು ಸದಸ್ಯೆ ಶೀಲಾ ಡಿಸೋಜ ಒತ್ತಾಯಿಸಿದರು. ಸ್ಥಳಪರೀಶೀಲನೆ ನಡೆಸಿ ಕ್ರಮಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ನೀರುಶುದ್ಧೀಕರಣ ಘಟಕದ ಸುತ್ತ ಕಾಂಪೌಂಡ್ ನಿರ್ಮಿಸಿ, ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಮಹೇಶ್, ಬಿ.ಸಿ.ವೆಂಕಟೇಶ್, ಬಿ.ಆರ್. ಮಹೇಶ್, ಪಿ.ಕೆ.ಚಂದ್ರು, ಶುಭಕರ್, ಶರತ್‍ಚಂದ್ರ ಒತ್ತಾಯಿಸಿದರು.
ಮಡಿಕೇರಿ ರಸ್ತೆ, ಎಂ.ಜಿ.ರಸ್ತೆ, ಬಸವೇಶ್ವರ ರಸ್ತೆ ರಾಜ್ಯ ಹೆದ್ದಾರಿ ಹಾದು ಹೋಗಲಿದೆ ಎಂದು ಲೋಕೋಪಯೋಗಿ ಇಲಾಖೆ ಈ ಹಿಂದೆ ನೋಟೀಸು ಜಾರಿಗೊಳಿಸಿತ್ತು. ಆದರೆ ಎರಡು ದಶಕ ಕಳೆದರೂ ರಸ್ತೆ ಅಗಲೀಕರಣವಾಗಿಲ್ಲ. ಇಲ್ಲಿಯವರಗೆ ಯಾರು ಹೊಸ ಮನೆ ಕಟ್ಟುತ್ತಿಲ್ಲ. ಬ್ಯಾಂಕ್‍ನವರು ಮನೆಸಾಲ ಕೊಡುತ್ತಿಲ್ಲ. ರಸ್ತೆ ಅಗಲೀಕರಣದ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಿಲ್ಲ. ದೊಡ್ಡ ಆತಂಕದಲ್ಲಿ ನಿವಾಸಿಗಳಿದ್ದಾರೆ ಎಂದು ಸದಸ್ಯರಾದ ಎಸ್.ಆರ್.ಸೋಮೇಶ್, ಎಸ್.ಮಹೇಶ್ ಶಾಸಕರ ಗಮನಕ್ಕೆ ತಂದರು. ಈ ಬಗ್ಗೆ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವಂತೆ ಶಾಸಕರು ಸೂಚಿಸಿದರು.
ಪಟ್ಟಣ ಅನೇಕ ವಾರ್ಡ್‍ಗಳಲ್ಲಿ ರಸ್ತೆ ಬದಿಯಲ್ಲಿ ವರ್ಷಗಟ್ಟಲೆ ದೊಡ್ಡ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಿದ್ದಾರೆ. ಇದರಿಂದ ವಾಹನ ಚಾಲಕರಿಗೆ ತೊಂದರೆಯಾಗಿದೆ ಎಂದು ಸದಸ್ಯೆ ನಾಗರತ್ನ ಹೇಳಿದರು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.