ನಗರಸಭೆಯಿಂದ ಸಕಾಲ ಸಪ್ತಾಹ ಜಾಗೃತಿ ಅಭಿಯಾನ : ನಗರಸಭೆ ಎರಡು ತಿಂಗಳಲ್ಲಿ 410 ಅರ್ಜಿ ವಿಲೇವಾರಿ : ಪೌರಾಯುಕ್ತ ಎಸ್.ವಿ.ರಾಮದಾಸ್ ಮಾಹಿತಿ

05/12/2020

ಮಡಿಕೇರಿ ಡಿ.05 : ಸಕಾಲ ಸಪ್ತಾಹ ಪ್ರಯುಕ್ತ ನಗರಸಭೆ ವತಿಯಿಂದ ಶನಿವಾರ ಜಾಗೃತಿ ಜಾಥ ನಡೆಯಿತು. ನಗರಸಭೆಯಿಂದ ಹೊರಟ ಜಾಥವು ಮಂಗೇರಿರ ಮುತ್ತಣ್ಣ ವೃತ್ತ, ಕೆ.ಎಸ್.ಜನರಲ್ ತಿಮ್ಮಯ್ಯ ವೃತ್ತದ ಮೂಲಕ, ಸ್ಕ್ವಾಡ್ರರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜಾಗೃತಿ ಅಭಿಯಾನ ನಡೆಯಿತು.
ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಮಾತನಾಡಿ ನಾಗರಿಕರಿಗೆ ಕಾಲ ಮಿತಿಯಲ್ಲಿ ಪೌರಾಡಳಿತ ಇಲಾಖೆಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆ ಜಾರಿಗೊಳಿಸಲಾಗಿದ್ದು, ಸಕಾಲದಡಿ ಅರ್ಜಿ ಸಲ್ಲಿಸಿದ್ದಲ್ಲಿ ಕಾಲ ಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಹೊಸದಾಗಿ ಸ್ವೀಕರಿಸುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡಲಾಗುವುದು. ಬಾಕಿ ಉಳಿದ ಅರ್ಜಿಗಳನ್ನು ಸಹ ವಿಲೇ ಮಾಡಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದರು.
2018 ರಿಂದ ಫಾರ್ಮ್ ನಂಬರ್ 3 ರಡಿ 450 ಅರ್ಜಿಗಳು ಬಾಕಿ ಇದ್ದವು, ಕಳೆದ ಎರಡು ತಿಂಗಳಲ್ಲಿ 410 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.
ಸಾರ್ವಜನಿಕರು ಯಾವುದೇ ರೀತಿಯ ಕುಂದುಕೊರತೆ ಸಂಬಂಧಿಸಿದಂತೆ ನೇರವಾಗಿ ನಗರಸಭೆಗೆ ಭೇಟಿ ಮಾಡಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಗರಸಭೆ ಕರ್ತವ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ನಗರಸಭೆ ವತಿಯಿಂದ ಕಾಲ ಮಿತಿಯಡಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ತಲುಪಿಸುವುದು ಪ್ರಮುಖ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಸಾರ್ವಜನಿಕರು ಸಕಾಲ ಯೋಜನೆ ಪಡೆದುಕೊಳ್ಳುವಂತೆ ಅವರು ಕೋರಿದರು. ನಗರಸಭೆ ಎಇಇ ರಾಜೇಂದ್ರ, ವ್ಯವಸ್ಥಾಪಕರಾದ ಸುಜಾತ, ನಗರಸಭೆ ಲೆಕ್ಕಾಧಿಕಾರಿ ತಾಹಿರ್, ನಾಗರಾಜು ಇತರರು ಇದ್ದರು.