ಕೊಡಗಿನಲ್ಲಿ ಬಂದ್ ಕರೆಗೆ ದೊರೆಯದ ಸ್ಪಂದನ : ಕುಶಾಲನಗರದಲ್ಲಿ ಕರವೇ ಪ್ರತಿಭಟನೆ

05/12/2020

ಮಡಿಕೇರಿ ಡಿ.5 : ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದು ಹೊರತುಪಡಿಸಿದರೆ ಉಳಿದಂತೆ ಎಲ್ಲಾ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು.
ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಘಟಕದ ಅಧ್ಯಕ್ಷ ವೆಂಕಟೇಶ ಪೂಜಾರಿ ನೇತೃತ್ವದಲ್ಲಿ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಬಸವನಗೌಡ ಪಾಟೀಲ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಂಇಎಸ್ ಸಂಘಟನೆಗೆ ದಿಕ್ಕಾರ, ನಾಡದ್ರೋಹಿ ಹೇಳಿಕೆ ನೀಡಿದ ಶಾಸಕರಿಗೆ ದಿಕ್ಕಾರ, ಜಾತಿ ವಿಷಬೀಜ ಬಿತ್ತುವ ರಾಜಕಾರಣಿಗಳಿಗೆ ದಿಕ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪ ಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು. ಐಬಿ ರಸ್ತೆಯ ಮೂಲಕ ಬಂದ ಕಾರ್ಯಕರ್ತರು ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆನಡೆಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ದೀಪಕ್, ಕರವೇ ಗೌರವಾಧ್ಯಕ್ಷ ಬಿ.ಎ.ನಾಗೇಗೌಡ, ಜಿಲ್ಲಾ ಖಜಾಂಜಿ ಹರೀಶ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾಲಿಂಗಪ್ಪ, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಗೋಪಾಲ್, ಕಾರ್ಯದರ್ಶಿ ವೇದಕುಮಾರ್, ಮುಖಂಡರಾದ ಉದಯ, ದೇವೇಂದ್ರ, ಕಮಲ್, ರೋಷನ್, ರಂಗಸ್ವಾಮಿ, ರವಿಚಂದ್ರ, ಸರಳಾರಾಮಣ್ಣ, ಶಾಜಿ, ಪಾಷ ಪಾಲ್ಗೊಂಡಿದ್ದರು.