ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ : ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ : ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ

05/12/2020

ಮಡಿಕೇರಿ ಡಿ.5 : ಯಾವುದೇ ಸರಕಾರಗಳು ದೇಶದ ಬೆನ್ನೆಲುಬಾಗಿರುವ ರೈತರನ್ನು ಕಡೆಗಣಿಸದೆ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಯೋಜನೆ ಹುಡುಕಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹೇಳಿದರು.
ಕೃಷಿಯಲ್ಲಿ ಮಾದರಿ ಸಾಧಕರನ್ನು ಗುರುತಿಸಿ ಅನ್ನದಾತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಭವನದಲ್ಲಿ ನಡೆದ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ 2020 ಕಾರ್ಯಕ್ರಮ ಉದ್ಘಾಟಿಸಿ ಸಾಧಕ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ರೈತರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಹಾಗೂ ಗುರುತಿಸುವ ಅತ್ಯುತ್ತಮವಾದ ಕಾರ್ಯಕ್ರಮ. ಭಾರತ ದೇಶದಲ್ಲಿ ಶೇಕಡ 70 ರಷ್ಟು ಹಾಗೂ ರಾಜ್ಯದಲ್ಲಿ ಶೇಕಡ 80 ರಷ್ಟು ರೈತರಿದ್ದು ಪ್ರಸಕ್ತ ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರೊಂದಿಗೆ ನಾನಾ ಸಮಸ್ಯೆಗಳು ರೈತರಿಗೆ ಕಾಡುತ್ತಿದೆ. ರೈತರ ಇಂತಹ ಸಂಕಷ್ಟಗಳ ನಡುವೆಯೂ ರೈತರನ್ನು ಗುರುತಿಸುವ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು.
ತಾನು ಆಡಳಿತ ಪಕ್ಷದ ಶಾಸಕನಾಗಿದ್ದುಕೊಂಡು ಹಲವು ಬಾರಿ ರೈತರ ಸಮಸ್ಯೆಗಳನ್ನು ಸರಕಾರದ ಮುಂದಿಡುವ ಪ್ರಯತ್ನ ಮಾಡಿದ್ದೇನೆ. ಮುಂದಿನ ದಿನದಲ್ಲಿಯೂ ರೈತರಿಗೆ ಹೆಚ್ಚಿನ ಸವಲತ್ತನ್ನು ನೀಡುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಇದರೊಂದಿಗೆ ಕಾಡು ಪ್ರಾಣಿಗಳಿಗೆ ಕಾಡಿನಲ್ಲಿಯೇ ಆಹಾರ, ನೀರು ದೊಕಿಸುವ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡಿ ವನ್ಯಜೀವಿಗಳು ಹಾಗೂ ಮಾನವ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರವೂ ಚಿಂತನೆ ನಡೆಸಿದೆ ಎಂದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ, ಕಾಳುಮೆಣಸು ಬೆಳೆಗಾರರ ಒಕ್ಕೂಟದ ಸಮನ್ವಯ ಸಮಿತಿಯ ಸಂಯೋಜಕ ಕೆ.ಕೆ ವಿಶ್ವನಾಥ್ ಮಾತನಾಡಿ, ರೈತರು ನೂರಾರು ಕಷ್ಟಗಳ ನಡುವೆಯೂ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಭಾರತದಲ್ಲಿ ಬೆಳೆಯುವ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ದೇಶದಲ್ಲಿ ಬೆಳೆಯುವ ಕಾಫಿಯ ಶೇಕಡ 70 ರಷ್ಟು ಬೆಳೆಯಲಾಗುತ್ತದೆ. ಕೊಡಗಿನ ಮಟ್ಟಿಗೆ ಕಾಫಿಗೆ ಸಾಕಷ್ಟು ವರ್ಷಗಳ ಇತಿಹಾಸವಿದೆ. ಆದರೆ ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ಹೊಲಿಸಿದರೆ ಕಾಫಿಯ ಉತ್ಪಾದನೆಯ ಪ್ರಮಾಣ ಮಾತ್ರ ದ್ವಿಗುಣಗೊಳ್ಳುತ್ತಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ರೈತರಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಅಗತ್ಯವಿದೆ. ಇಂದು ರೈತರಿಗೆ ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯುವ ವ್ಯವಸ್ಥೆ ಸರಕಾರದ ಮೂಲಕ ಆಗಬೇಕಿದೆ ಎಂದರು.
ಕೊಡಗಿನಲ್ಲಿ ಆನೆ, ಹುಲಿ ಹಾಗೂ ವನ್ಯಜೀವಿಗಳ ಸಂಘರ್ಷದೊಂದಿಗೆ ರೈತರು ಬದುಕು ನಡೆಸಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಶಾಸಕರು ಸರಕಾರದೊಂದಿಗೆ ಚರ್ಚೆ ನಡೆಸಿ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯಲು ಕ್ರಮ ವಹಿಸಬೇಕು ಹಾಗೂ ಆನೆಗಳ ಸಂತತಿ ನಿಯಂತ್ರಿಸಲು ಕ್ರಮ ವಹಿಸಲಿ ಎಂದು ಆಗ್ರಹಿಸಿದರು.
ಕೃಷಿ ಕ್ಷೇತ್ರದಲ್ಲಿ ನಾನಾ ಸಾಧನೆ ಮಾಡಿದ ಕೊಡಗು ಜಿಲ್ಲೆಯ ಐದು ಸಾಧಕ ಕೃಷಿಕರು ವಿಕ ಸೂಪರ್ ಸ್ಟಾರ್ ರೈತ 2020 ಪುರಸ್ಕಾರಕ್ಕೆ ಭಾಜನರಾದರು.
ವಿರಾಜಪೇಟೆ ತಾಲೂಕು, ಚಾಮಿಯಾಲ ಗ್ರಾಮದ ಕೆ.ಎಚ್. ಮೊಹಮ್ಮದ್ ಹನೀಫ್, ಕುಶಾಲನಗರ ಸಮೀಪದ ಬೈಚನಹಳ್ಳಿ ಗ್ರಾಮದ ಸುಜಾ ಎಸ್.ರಾಜೇಶ್, ಸೋಮವಾರಪೇಟೆ ತಾಲೂಕು, ಶನಿವಾರಸಂತೆ ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಎ.ಡಿ ಮೋಹನ್ ಕುಮಾರ್, ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿ ಬೇಂಗೂರು ಗ್ರಾಮದ ಕೂಡಕಂಡಿ ಎಲ್. ರಾಜೀವ್, ಹಾಕತ್ತೂರು ಗ್ರಾಮದ ದೇವಣಿರ ಎಂ. ಕುಮಾರ್‍ಗೆ ಮೈಸೂರು ಪೇಟಾ ಹಾಕಿ, ಶಾಲು ಹೊದಿಸಿ, ಸೂಪರ್ ಸ್ಟಾರ್ ರೈತ ಪ್ರಶಸ್ತಿ ಫಲಕ, ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮೈಸೂರಿನ ರಾಘವೇಂದ್ರ ಮತ್ತು ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ನೆರೆ ಸಂತ್ರಸ್ಥರು ಉತ್ಪಾದಿಸಿದ ಉತ್ಪನ್ನಗಳ ಮಾರಾಟದ ವ್ಯವಸ್ಥೆಯನ್ನು ಓಡಿಪಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಸ್ಟಾಲ್ ವ್ಯವಸ್ಥೆಯಲ್ಲಿ ರೈತರಿಗೆ ಅಗತ್ಯ ಮಾಹಿತಿ ಒದಗಿಸಲಾಗಿತ್ತು.