ಹುದಿಕೇರಿ ಜನತಾ ಪ್ರೌಢಶಾಲೆಗೆ ಎ.ಎಸ್. ಪೊನ್ನಣ್ಣ ಭೇಟಿ : ಪುನಶ್ಚೇತನ ಯೋಜನೆಗಾಗಿ ಪ್ರಮುಖರೊಂದಿಗೆ ಸ್ಥಳ ಪರಿಶೀಲನೆ

06/12/2020


ಖಾಸಗಿ ಸಹಭಾಗಿತ್ವದೊಂದಿಗೆ ಶಾಲೆಯ ಸಮಗ್ರ ಅಭಿವೃದ್ಧಿಗೆ ಸಿದ್ಧಗೊಂಡ ಯೋಜನೆ
ಮಡಿಕೇರಿ ಡಿ.06: ದಕ್ಷಿಣ ಕೊಡಗಿನ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿರುವ ಹುದಿಕೇರಿಯ ಜನತಾ ಪ್ರೌಢಶಾಲೆಗೆ ಶೀಘ್ರದಲ್ಲೇ ಕಾಯಕಲ್ಪ ದೊರೆಯಲಿದೆ. ತಮ್ಮ ಊರಿನ ಪುರಾತನ ಶಾಲೆಯನ್ನು ಅತ್ಯಾಧುನಿಕ ರೀತಿಯಲ್ಲಿ ಪುನಶ್ಚೇತನಗೊಳಿಸುವ ಮಹತ್ತರವಾದ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಹಿರಿಯ ವಕೀಲರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು  ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊನ್ನಣ್ಣ ಅವರು ಸ್ಥಳೀಯ ಪ್ರಮುಖರೊಂದಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಎ.ಕೆ. ಸುಬ್ಬಯ್ಯ – ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್’ ವತಿಯಿಂದ ಬೆಂಗಳೂರಿನ ಪ್ರತಿಷ್ಠಿತ ‘ಸೆಕು ಮ್ಯಾಕ್ಸ್’ ಮತ್ತು ‘ಸ್ಪೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್’ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಹುದಿಕೇರಿಯ ಜನತಾ ಪ್ರೌಢಶಾಲೆಯನ್ನು ಆಧುನೀಕರಣಗೊಳಿಸುವ ಮೂಲಕ ಹೊಸ ಕಾಯಕಲ್ಪ ನೀಡಲು ಪೊನ್ನಣ್ಣ ಅವರು ಯೋಜನೆ ರೂಪಿಸಿದ್ದು, ಈಗಾಗಲೇ ಅದಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ಆರಂಭಗೊಂಡಿದೆ.               ಹುದಿಕೇರಿಯವರೇ ಆದ  ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರೂ ಆಗಿರುವ ಎ.ಎಸ್. ಪೊನ್ನಣ್ಣ ಅವರು ಈ ಭೇಟಿ ಸಂದರ್ಭದಲ್ಲಿ ಜನತಾ ಪ್ರೌಢಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಪುನಶ್ಚೇತನ ಯೋಜನೆಯ ಕುರಿತಂತೆ ಸಮಗ್ರವಾಗಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು.
ಹಲವು ದಶಕಗಳ ಇತಿಹಾಸವಿರುವ ಹುದಿಕೇರಿಯ ಜನತಾ ಪ್ರೌಢಶಾಲೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಮೊದಲನೇ ಹಂತವಾಗಿ ಕಟ್ಟಡ ಸೇರಿದಂತೆ ಇಡೀ ಶಾಲಾ ಪರಿಸರವನ್ನು ನವೀಕರಣಗೊಳಿಸಲಾಗುವುದು. ಮಾಹಿತಿ ತಂತ್ರಜ್ಞಾನ ಆಧಾರಿತವಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಶಾಲಾ ಪರಿಸರವನ್ನು ಪರಿಸರ ಸ್ನೇಹಿ ವಲಯವಾಗಿ ರೂಪಿಸುವುದು ಮೊದಲಾದ ಕಾರ್ಯಗಳನ್ನು ಉದ್ದೇಶಿತ ಈ ಯೋಜನೆ  ಒಳಗೊಂಡಿದೆ ಎಂದು ಪೊನ್ನಣ್ಣ ಅವರು ಸ್ಥಳ ಪರಿಶೀಲನೆಯ ನಂತರ ತಿಳಿಸಿದ್ದಾರೆ. ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪೊನ್ನಣ್ಣ ಅವರು ಜನತಾ ಪ್ರೌಢ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡರಾದ ಚೆಕ್ಕೇರ ವಾಸು ಕುಟ್ಟಪ್ಪ, ಕಾಂಗ್ರೆಸ್ ಪ್ರಮುಖರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಕೇಚಮಾಡ  ಶಿವ ನಾಚಪ್ಪ, ಅಜ್ಜಿಕುಟ್ಟಿರ ಪ್ರಶಾಂತ್, ಚಂಗುಲಂಡ ಸೂರಜ್, ಚೆಕ್ಕೇರ ಸೂರ್ಯಪ್ರಕಾಶ್ ಮೊದಲಾದವರು ಸೇರಿದಂತೆ ಆಡಳಿತ ಮಂಡಳಿಯ ಕೆಲ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಬೋಧಕ ವೃಂದ ಹಾಜರಿದ್ದರು.