ಕೂತಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ : ಚುನಾವಣೆ ಬಹಿಷ್ಕಾರ !

06/12/2020

ಸೋಮವಾರಪೇಟೆ ಡಿ.6 : ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಹಲವು ಭಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲದ ಹಿನ್ನೆಲೆಯಲ್ಲಿ ಮುಂದೆ ನಡೆಯುವ ಎಲ್ಲ ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಹಾಗು ಬಸ್ ಸಂಚಾರವಿಲ್ಲದೆ ಗ್ರಾಮಸ್ಥರ ಪರದಾಡುತ್ತಿದ್ದಾರೆ ಎಂದು ಶನಿವಾರ ನಡೆದ ಗ್ರಾಮಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಿ.ಎ.ಪರಮೇಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ರಾಮದಲ್ಲಿ 182 ಕುಟುಂಬಗಳಿದ್ದು, 680 ಮತದಾರರಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಕೂತಿ ವಾರ್ಡ್‍ನಿಂದ ಸ್ಪರ್ಧಿಗಳಿಗೆ ಸ್ಪರ್ಧಿಸಲು ಅವಕಾಶ ಇದೆ. ಇಲ್ಲಿ ಯಾವುದೇ ಪರಿಶಿಷ್ಟ ಪಂಗಡದ ಕುಟುಂಬಗಳಿಲ್ಲ. ಆದರೂ, ಕಳೆದ ಮೂರು ಅವಧಿಯಿಂದಲೂ ಪರಿಶಿಷ್ಟ ಪಂಗಡದವರಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಇದರಿಂದಾಗಿ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಅಲ್ಲದೆ, 182 ಕುಟುಬಗಳಿರುವ ಇಲ್ಲಿ ಇದ್ದ ನ್ಯಾಯಬೆಲೆ ಅಂಗಡಿಯನ್ನು ತೆಗೆದು, ನಾಲ್ಕು ಕಿಲೋ ಮೀಟರ್ ದೂರದ ಊರಿಗೆ ಸ್ಥಳಾಂತರ ಮಾಡಿದ್ದು, ಪಡಿತರಕ್ಕಾಗಿ ಎರಡು ದಿನ ಅಲೆಯಬೇಕಾಗಿದೆ ಎಂದರು.
ಗ್ರಾಮದಲ್ಲಿ 50 ರಿಂದ 60 ವಿದ್ಯಾರ್ಥಿಗಳಿದ್ದು, ಈಗ ನಡೆಯುತ್ತಿರುವ ಆನ್‍ಲೈನ್ ತರಗತಿಗೆ ಮೊಬೈಲ್ ಟವರ್ ಸಂಪರ್ಕದ ಕೊರತೆಯಿಂದ ಮೂರು ನಾಲ್ಕು ಕಿಲೋ ಮೀಟರ್ ದೂರಕ್ಕೆ ನಡೆದುಕೊಂಡು ಹೋಗಿ ತರಗತಿ ಪಡೆಯಬೇಕಿದೆ. ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯ ಸಂಸದರು, ಶಾಸಕರು ಹಾಗು ಅಧಿಕಾರಿಗಳಲ್ಲಿ ಮನವಿ ಮಾಡಿ ಪ್ರಯೋಜನವಿಲ್ಲದಂತಾಗಿದೆ. ಗ್ರಾಮದಿಂದ ಪಟ್ಟಣಕ್ಕೆ ಜಿಯೋ ಕಂಪೆನಿಯವರು ಭೂಮಿ ಅಡಿಯಲ್ಲಿ ಫೈಬರ್ ಕೇಬಲ್ ಅಳವಡಿಸುವ ಸಂದರ್ಭ ಬಿಎಸ್‍ಎನ್‍ಎಲ್ ಸಂಸ್ಥೆಯ ಕೇಬಲ್ ಹಾಳು ಮಾಡಿ, ದೂರವಾಣಿ ಸಂಪರ್ಕವೇ ಇಲ್ಲದಂತಾಗಿದೆ ಎಂದು ಸೋಮೇಶ್ವರ ಯುವಕ ಸಂಘದ ಅಧ್ಯಕ್ಷ ಎಚ್.ಎಸ್. ದಿವಾಕರ್ ಆರೋಪಿಸಿದರು.
ಕಲ್ಕಂದೂರು ಗ್ರಾಮದಿಂದ ಕೂತಿಯವರೆಗೆ ತೆರಳುವ ರಸ್ತೆ ಕಿರಿದಾಗಿದೆ. ರಾಜ್ಯ ಹೆದ್ಧಾರಿಯಾಗಿರುವ ಈ ರಸ್ತೆಯಲ್ಲಿ ದಿನಂಪ್ರತಿ ಭಾರಿ ವಾಹನಗಳೊಂದಿಗೆ ನೂರಾರು ವಾಹನಗಳು ಸಂಚರಿಸುತ್ತಿವೆ. ಅಲ್ಲಲ್ಲಿ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ, ಇಲ್ಲಿಯವರೆಗೆ ರಸ್ತೆ ಸರಿಪಡಿಸಲು ಮುಂದಾಗಿಲ್ಲ. ಅಲ್ಲದೆ, ಸೂಕ್ತ ಬಸ್ ಸೌಲಭ್ಯವಿಲ್ಲದೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಹೇಳಿದರು.
ಈ ಎಲ್ಲ ಸಮಸ್ಯೆಗಳ ಪರಿಹಾರ ಆಗದ ಹೊರತು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯಾವುದೇ ಅಭ್ಯಾರ್ಥಿಗಳು ಸ್ಪರ್ಧಿಸದೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ಯು. ಉಮೇಶ್, ಸಿ.ಸಿ. ದಯಾನಂದ, ಸಿ.ಕೆ. ನಾಗರಾಜು ಇದ್ದರು.