ಚುನಾವಣೆಗಾಗಿ ಶಸ್ತ್ರಾಸ್ತ್ರ ಠೇವಣಿ : ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಕೊಡಗು ಕಾಂಗ್ರೆಸ್

06/12/2020

ಪೊನ್ನಂಪೇಟೆ, ಡಿ.06: ಚುನಾವಣೆ ಸಂದರ್ಭದಲ್ಲಿ ಲೈಸೆನ್ಸುದಾರರು ಹೊಂದಿರುವ ತಮ್ಮ ಅಧಿಕೃತ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಬೇಕೆಂಬ ಆದೇಶ ಅವೈಜ್ಞಾನಿಕವಾಗಿದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಲೈಸೆನ್ಸ್ ದಾರರಿಗೆ ಇದು ತೀವ್ರ ಸಮಸ್ಯೆಯಾಗುತ್ತಿದೆ ಎಂದು ಹೇಳಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ ಅವರು, ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಕೂಡಲೇ ಪರಿಷ್ಕರಿಸಿದಿದ್ದಲ್ಲಿ ಶೀಘ್ರದಲ್ಲೆ ನ್ಯಾಯಾಂಗ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು  ತಿಳಿಸಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಚುನಾವಣೆ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಬೇಕೆಂದು ಚುನಾವಣಾ ಆಯೋಗ ಆದೇಶಿಸುತ್ತದೆ. ಇದನ್ನೇ ನೆಪವಾಗಿಸುವ ಮತ್ತು ಇದಕ್ಕೆ ತನ್ನದೇ ಆದ ಅರ್ಥ ಕಲ್ಪಿಸುವ ಜಿಲ್ಲಾಡಳಿತ ಎಲ್ಲಾ ಲೈಸೆನ್ಸುದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿಯಿರಿಸಬೇಕೆಂದು ಕುರುಡು ಆದೇಶ ಜಾರಿ ಮಾಡುತ್ತದೆ. ಆದರೆ ಇದರ ಸಾಧಕ-ಬಾಧಕಗಳ ಬಗ್ಗೆ ಜಿಲ್ಲಾಡಳಿತ ಗಮನವೇ ಹರಿಸುವುದಿಲ್ಲ ಎಂದು ಅವರು ಅಸಮಾಧಾನ  ವ್ಯಕ್ತಪಡಿಸಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು  ದುರುಪಯೋಗಪಡಿಸಿಕೊಂಡವರು, ಕೊಲೆ-ಸುಲಿಗೆ-ದರೋಡೆ ಇತ್ಯಾದಿ ಘೋರ ಪ್ರಕರಣಗಳಲ್ಲಿ ಅಪರಾಧಿಗಳಾದವರು, ಕೋಮು ಗೂಂಡಾಗಳು, ರೌಡಿ ಪಟ್ಟಿಯಲ್ಲಿ ಇರುವವರು,  ಹೀಗೆ  ಕ್ರಿಮಿನಲ್ ಹಿನ್ನೆಲೆ ಉಳ್ಳವರು ಲೈಸೆನ್ಸ್ ಮೂಲಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ಅಂಥವುಗಳನ್ನು ಮಾತ್ರ ಚುನಾವಣೆ ಸಂದರ್ಭದಲ್ಲಿ ಠೇವಣಿ ಇರಿಸಬೇಕು ಎಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ಆದರೆ ಕೊಡಗು ಸೇರಿದಂತೆ ಕರ್ನಾಟಕದಲ್ಲಿ ಲೈಸೆನ್ಸ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಬೇಕಾಗಿದೆ. ಇದು ಸಮಾಜದ ಪ್ರತಿಯೊಬ್ಬರನ್ನು ಅಪರಾಧಿಗಳಂತೆ ಕಾಣುವ ಅಧಿಕಾರಿಗಳ ಮನೋಪ್ರವೃತ್ತಿಯಾಗಿದೆ ಎಂದು ಹೇಳಿರುವ ಟಾಟು ಮೊಣ್ಣಪ್ಪ ಅವರು, ಕೊಡಗಿನ ಎಲ್ಲಾ ಲೈಸೆನ್ಸುದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಸರಿಯಲ್ಲ. ಈ ರೀತಿಯ ಕುರುಡು ಆದೇಶ ಕರ್ನಾಟಕದಲ್ಲಿ ಮಾತ್ರ ಜಾರಿ ಮಾಡಲಾಗುತಿದೆ ಎಂಬ ಮಾಹಿತಿಯಿರುವುದಾಗಿ ಅವರು ಹೇಳಿದರು.
ಕೊಡಗಿನಲ್ಲಿ ಲೈಸೆನ್ಸ್ ಮೂಲಕ ಬಂದೂಕು ಹೊಂದಿರುವವರು ತಮ್ಮ ಬೆಳೆ ರಕ್ಷಣೆ ಮತ್ತು ಆತ್ಮರಕ್ಷಣೆಗಾಗಿ ಮಾತ್ರ ಅದನ್ನು ಬಳಸುತ್ತಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಯಾವುದೇ ಚುನಾವಣೆಗಳಲ್ಲಿ ಲೈಸೆನ್ಸುದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ದುರುಪಯೋಗಪಡಿಸಿಕೊಂಡ ನಿದರ್ಶನಗಳಿಲ್ಲ. ಹೀಗಿದ್ದೂ ಈ ಅವೈಜ್ಞಾನಿಕ ಆದೇಶದ ಅಗತ್ಯವೇನು? ಒಂದು ವೇಳೆ ಆದೇಶ ಜಾರಿ ಮಾಡಿದರೂ ಅದು ಕ್ರಿಮಿನಲ್ ಹಿನ್ನೆಲೆ ಹೊಂದಿರುವವರಿಗೆ ಮಾತ್ರ ಅನ್ವಯಿಸಬೇಕಲ್ಲವೇ?ಎಂದು ಪ್ರಶ್ನಿಸಿದ ಟಾಟು ಮೊಣ್ಣಪ್ಪ ಅವರು, ಜಿಲ್ಲಾಧಿಕಾರಿಗಳ ಆದೇಶವನ್ನು ನೆಪವಾಗಿಸಿಕೊಂಡು ಇದೀಗ ಪೊಲೀಸರು ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.
ಕೊಡಗಿನಲ್ಲಿ ಇದೀಗ ಕಾಫಿ ಕುಯಿಲಿನ ಸಮಯ ಸಮೀಪಿಸುತ್ತಿದೆ. ಅಲ್ಲದೆ ಕರಿಮೆಣಸಿನ ಫಸಲು ಕುಯ್ಲಿಗೆ ಸಿದ್ಧವಾಗುತ್ತಿದೆ. ಈ ಸಮಯದಲ್ಲಿ ಬೆಳೆಯ ರಕ್ಷಣೆಗಾಗಿ ಹೊಂದಿರುವ ಬಂದೂಕುಗಳನ್ನು ಠೇವಣಿ ಇರಿಸುವುದು ಎಷ್ಟು ಸರಿ? ಕೊಡಗಿನಲ್ಲಿ ಕಾಡಾನೆ ಮತ್ತು ಹುಲಿ ಸೇರಿದಂತೆ ವನ್ಯಜೀವಿಗಳ ಹಾವಳಿ ನಿರಂತರವಾಗಿದ್ದು, ದಿನೇ ದಿನೇ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಅವುಗಳಿಂದ ಕೃಷಿಕರು ತಮ್ಮ ಬೆಳೆಗಳನ್ನು ರಕ್ಷಿಸುವುದು ಹೇಗೆ? ಕೃಷಿಕರಿಗೆ ಕಾಫಿ ಮತ್ತು ಕರಿಮೆಣಸು ಕುಯಿಲಿನ ಸಮಯದಲ್ಲಿ ಶಸ್ತ್ರಾಸ್ತ್ರಗಳು ತೀರಾ ಅಗತ್ಯವಿರುತ್ತದೆ. ಜಿಲ್ಲೆಯ ಹಲವಾರು ಕುಗ್ರಾಮಗಳಲ್ಲಿ ಸಾಕಷ್ಟು ಒಂಟಿ ಮನೆಗಳಿದ್ದು, ಅಲ್ಲಿ ಸಮಾಜಘಾತಕರಿಂದ ಕಳ್ಳತನದ ಭಯವಿದೆ. ಅಲ್ಲದೆ ಜಿಲ್ಲೆಯ ಕೆಲ ಗಡಿಪ್ರದೇಶಗಳಲ್ಲಿ ಹಿಂದೆ ನಕ್ಸಲರು ಕಾಣಿಸಿಕೊಂಡ ನಿದರ್ಶನಗಳಿದೆ. ಕೃಷಿಕರು ಮತ್ತು ಆತ್ಮ ರಕ್ಷಣೆಗಾಗಿ ಬಂದೂಕು ಹೊಂದಿರುವವರಿಗೆ ಅದು ಸದಾ ಕಾಲ ಅವರ ಬಳಿ ಇರಬೇಕಾಗುತ್ತದೆ ಎಂದು ವಿವರಣೆ ನೀಡಿರುವ ಟಾಟು ಮೊಣ್ಣಪ್ಪ ಅವರು, ಒಂದು ವೇಳೆ ಈ ಕುರಿತು ಜಿಲ್ಲೆಯಲ್ಲಿ ಯಾವುದೇ ಅನಾಹುತ ನಡೆದರೂ ಅದರ ನೇರ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತದ ಅವೈಜ್ಞಾನಿಕ ಆದೇಶದಿಂದ ಜಿಲ್ಲೆಯ ಜನತೆ ಗಂಭೀರ ಸ್ವರೂಪದ ಸಮಸ್ಯೆ ಎದುರಿಸುವಂತಾಗಿದೆ.  ಆದ್ದರಿಂದ ಕೊಡಗಿನ ಶಾಸಕರು ಇದನ್ನು ಅತಿ ಗಂಭೀರವಾಗಿ ಪರಿಗಣಿಸಿ,  ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿಯೆತ್ತಬೇಕು. ಸಮಸ್ಯೆಯ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲಿ ಪರಿಹಾರದ ಮಾರ್ಗೋಪಾಯಗಳ ಕುರಿತು  ಕಂದಾಯ ಮತ್ತು ಗೃಹ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತಾಗಬೇಕು ಎಂದು ಒತ್ತಾಯಿಸಿರುವ ಟಾಟು ಮೊಣ್ಣಪ್ಪ ಅವರು, ಶಸ್ತ್ರಾಸ್ತ್ರಗಳ ಲೈಸೆನ್ಸ್ ನವೀಕರಣಕ್ಕೆ ಈ ಹಿಂದೆ ಸರಕಾರ ನಿಗದಿಪಡಿಸಿದ ರೂ. 60 ರ ಬದಲಾಗಿ ಇದೀಗ ಕಳೆದ ವರ್ಷದಿಂದ ಅದನ್ನು ದಿಡೀರ್ ಆಗಿ ರೂ.1500ಕ್ಕೆ ಏರಿಸಿರುವುದು ಜನವಿರೋಧಿ ಧೋರಣೆಯಾಗಿದೆ.  ಈ ಬಗ್ಗೆಯೂ ಶಾಸಕರು ಗಮನಹರಿಸಿ ಜನತೆಗೆ ನ್ಯಾಯ ಒದಗಿಸಬೇಕು ಎಂದು ಅವರು  ಆಗ್ರಹಿಸಿದ್ದಾರೆ.
ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಅವರು, ಚುನಾವಣೆ ಬಂದರೆ ಕೆಲ ಅಧಿಕಾರಿಗಳಿಗೆ ಅದು ಸುಗ್ಗಿಯ ಕಾಲವಾಗುತ್ತದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಮಣ್ಣುಪಾಲು ಮಾಡಿಬಿಡುತ್ತಾರೆ.  ಚುನಾವಣಾ ವ್ಯವಸ್ಥೆ ಕೂಡ ಪ್ರಜಾಪ್ರಭುತ್ವದ  ಅಧೀನಕ್ಕೆ ಒಳಪಡುತ್ತದೆ ಎಂಬ ಕನಿಷ್ಠ ಜ್ಞಾನವೂ ಅವರಿಗೆ ಇಲ್ಲದಾಗುತ್ತದೆ. ಸರಕಾರದ ಎಲ್ಲಾ ಅಧಿಕಾರಿಗಳು ಜನಸೇವಕರೇ ಹೊರತು ಅವರು ಜನರ ಯಜಮಾನರಾಗುವುದಿಲ್ಲ. ಕೊಡಗಿನ ಕೆಲ ಅಧಿಕಾರಿಗಳಿಗೆ  ಪ್ರಜಾಪ್ರಭುತ್ವದ ಮೂಲ ಆಶಯವೇ ತಿಳಿದಿಲ್ಲ. ಈ ಕಾರಣಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳ ದಬ್ಬಾಳಿಕೆ ಹೆಚ್ಚುತ್ತದೆ ಎಂದು ಕಿಡಿಕಾರಿದರು.
ಚುನಾವಣೆ ಸಂದರ್ಭದಲ್ಲಿ ಲೈಸನ್ಸ್ ದಾರರು ತಮ್ಮ ಬಂದೂಕುಗಳನ್ನು ಠೇವಣಿ ಇರಿಸಬೇಕೆಂಬ ಆದೇಶದಿಂದ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರದಲ್ಲೇ ಲೈಸೆನ್ಸ್ ದಾರರ ಸಭೆ ಕರೆದು ಮುಂದಿನ ನ್ಯಾಯಾಂಗ ಹೋರಾಟದ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರಲ್ಲದೆ, ಹಿಂದೆ ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ ಲೈಸೆನ್ಸ್ ದಾರರಿಗೆ ನ್ಯಾಯ ದೊರೆತ ನಿದರ್ಶನಗಳಿವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ತಿತಿಮತಿಯ ಲೈಸೆನ್ಸ್ ದಾರರಾದ ವಿ.ಎಸ್. ಸತೀಶ್ ಉಪಸ್ಥಿತರಿದ್ದರು.