11 ಕುರಿ, 6 ಮೇಕೆ ಸಾವು

07/12/2020

ಬೆಂಗಳೂರು ಡಿ.7 : ಸಿಲಿಕಾನ್ ಸಿಟಿ ಬೆಂಗಳೂರಿಗೆ ಚಿರತೆ ನುಗ್ಗಿರುವ ಶಂಕೆ ವ್ಯಕ್ತವಾಗಿದ್ದು, ಕುರಿಗಳನ್ನಿರಿಸಿದ್ದ ಶೆಡ್ ನುಗ್ಗಿ ದಾಳಿ ಮಾಡಿದೆ.
ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ವೀರಭದ್ರನಗರದಲ್ಲಿ ಕುರಿ/ಮೇಕೆ ಸಾಕಾಣಿಕಾ ಶೆಡ್ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆಯ ದಾಳಿಗೆ 6 ಮೇಕೆ ಹಾಗೂ 11 ಕುರಿಗಳು ಸಾವನ್ನಪ್ಪಿವೆ.
ಮೂಲಗಳ ಪ್ರಕಾರ ಪಟೇಲ್ ಅನಂತ್ ಸ್ವಾಮಿ ಎಂಬುವವರು ಕುರಿ ಸಾಕಾಣಿಕೆಗಾಗಿ ಶೇಡ್ ನಿರ್ಮಾಣ ಮಾಡಿದ್ದರು. ನಿನ್ನೆ ತಡರಾತ್ರಿಯಲ್ಲಿ ಚಿರತೆ ಶೆಡ್ ಗೆ ನುಗ್ಗಿ ದಾಳಿ ನಡೆಸಿದೆ. ನಗರದ ಹೊರಭಾಗದಲ್ಲಿ ಇಂತಹ ದಾಳಿ ಸಾಮಾನ್ಯವಾದರೂ, ನಗರದೊಳಗೇ ಚಿರತೆ ನುಗ್ಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯಿಂದಾಗಿ ವೀರಭದ್ರ ನಗರದ ಸುತ್ತಮುತ್ತಲಿನ ಜನ ಆತಂಕಕ್ಕೊಳಗಾಗಿದ್ದಾರೆ.
ದಾಳಿಯ ಬಗ್ಗೆ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅಧಿಕಾರಿಯೊಬ್ಬರು ಸೀಳುನಾಯಿ ಅಥವಾ ಚಿರತೆ ದಾಳಿ ಮಾಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.