ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ : ಮಡಿಕೇರಿಯಲ್ಲಿ ವೀರಯೋಧರಿಗೆ ಗೌರವ ನಮನ

ಮಡಿಕೇರಿ ಡಿ. 7 : ದೇಶದ ಅಖಂಡತೆ, ಏಕತೆ ಮತ್ತು ಸಾರ್ವಭೌಮತೆಯ ಪ್ರತೀಕವಾಗಿರುವ ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಅಮರ್ ಜವಾನ್ ಸ್ಮಾರಕದಲ್ಲಿ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮೂಲಕ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ರಕ್ಷಣಾ ಪಡೆಗಳಿಗೆ ಹಾಗೂ ಹುತಾತ್ಮರಿಗೆ ಗೌರವ ಅರ್ಪಿಸಿದರು.
ಧ್ವಜಾ ದಿನಾಚರಣೆ ಅಂಗವಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ಮೊದಲಿಗೆ ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪಗುಚ್ಚವಿಟ್ಟು ಗೌರವ ವಂದನೆ ಸಲ್ಲಿಸಿದರು.
ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ಸಂಚಾಲಕ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಮೇಜರ್ ನಂಜಪ್ಪ, ಮೇಜರ್ ಚಿಂಗಪ್ಪ, ನಿವೃತ್ತ ವಾಯು ಸೇನಾ ಅಧಿಕಾರಿ ಎಂ.ಎ. ಅಚ್ಚಯ್ಯ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೆ.ಎಸ್. ದೇವಯ್ಯ, ಕೊಡಗು ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕಿ ಗೀತಾ, ನಿವೃತ್ತ ಸೇನಾಧಿಕಾರಿಗಳು, ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ಅಮರ್ ಜವಾನ್ ಯುದ್ದ ಸ್ಮಾರಕ್ಕಕೆ ಪುಷ್ಪ ನಮನ ಸಲ್ಲಿಸಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ರಕ್ಷಣಾ ಪಡೆಗಳಿಗೆ “ಗಾಡ್ರ್ಸ್ ಆಫ್ ಹಾನರ್” ನೀಡುವ ಮೂಲಕ ತನ್ನ ಗೌರವ ಸೂಚಿಸಿತು. ಗಾಳಿಯಲ್ಲಿ 3 ಸುತ್ತು ಕುಶಲ ತೋಪು ಸಿಡಿಸಿದ ಜಿಲ್ಲಾ ಸಶಸ್ತ್ರ ಪೊಲೀಸ್ ತಂಡ, ಯುದ್ದ ಸ್ಮಾರಕ ಅಮರ್ ಜವಾನ್ಗೆ ಗೌರವ ಸಲ್ಲಿಸಿತು. ಇದೇ ವೇಳೆ ದೇಶ ರಕ್ಷಣೆಯ ಸಂದರ್ಭ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಿ 2 ನಿಮಿಷ ಮೌನಾಚರಣೆ ನಡೆಸಲಾಯಿತು.
ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಶಸ್ತ್ರ ಪಡೆಗಳ ಧ್ವಜಗಳನ್ನು ಅನಾವರಣಗೊಳಿಸಿದರು.
ಈ ಸಂದರ್ಭ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ದಿನೇಶ್ ಕುಮಾರ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ರಾಘವೇಂದ್ರ ಮತ್ತಿತ್ತರ ಪ್ರಮುಖರು ಹಾಜರಿದ್ದರು.






