ಮಾಧ್ಯಮ ಸ್ಪಂದನ ತಂಡದಿಂದ ವಿದ್ಯಾರ್ಥಿನಿಗೆ ಐ ಫೋನ್ ವಿತರಣೆ

07/12/2020

ಮಡಿಕೇರಿ ಡಿ. 7 : ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೊನ್ನೆಟಿ ನಮೃತಾಗೆ ಅಗತ್ಯಅಗತ್ಯವಿದ್ದ ಐ ಫೋನ್ ಮಾಧ್ಯಮ ಸ್ಪಂದನ ಮೂಲಕ ಒದಗಿಸಲಾಗಿದೆ.
ಮುಂಬಯಿಯಲ್ಲಿ ನೆಲೆಸಿರುವ, ಉದ್ಯಮಿ, ಮಹಾದಾನಿ ಅಕ್ಕಳತಂಡ ಮೊಯ್ದು ಮಾಧ್ಯಮ ಸ್ಪಂದನ ಕರೆಗೆ ಸ್ಪಂದಿಸಿ ಸ್ವಯಂ ಪ್ರೇರಿತವಾಗಿ 9,000 ರೂಪಾಯಿ ಮೌಲ್ಯದ ಮೊಬೈಲ್ ಒದಗಿಸಿದ್ದಾರೆ.
ಹತ್ತನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕಾಗಿ ತಂದೆ ಮಗಳ ವಿದ್ಯಾಭ್ಯಾಸ ಬಗ್ಗೆ ಆಸಕ್ತಿ ತೋರಲಿಲ್ಲ.
ಕಷ್ಟಪಟ್ಟು ವ್ಯಾಸಂಗ ಮಾಡಿ, ತಾಯಿ ಸಹಕಾರದಲ್ಲಿ ಪಿಯುಸಿ ಪ್ರವೇಶ ಪಡೆದಿದ್ದಳು.
ಕರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗೆ ಅಗತ್ಯವಾದ ಮೊಬೈಲ್ ಇಲ್ಲದೆ ವಿದ್ಯಾರ್ಥಿನಿ ಸಮಸ್ಯೆಗೆ ಸಿಲುಕಿದ್ದನ್ನು ಮಾಧ್ಯಮ ಸ್ಪಂದನ ತಂಡದ ಕುಡೆಕಲ್ ಸಂತೋಷ್ ಗಮನಕ್ಕೆ ತರಲಾಯಿತು.
ಮಾಧ್ಯಮ ಸ್ಪಂದನ ತಂಡದ ಮನವಿಗೆ ತಕ್ಷಣ ಸ್ಪಂದಿಸಿದ ಹಲವು ದಾನಿಗಳು ಮೊಬೈಲ್ ನೀಡಲು ಮುಂದಾದರು. ಈ ಪೈಕಿ ಅಕ್ಕಳತಂಡ ಮೊಯ್ದು ಒದಗಿಸಿದ ಮೊಬೈಲ್ ವಿದ್ಯಾರ್ಥಿನಿಗೆ ಇಂದು ಹಸ್ತಾಂತರಿಸಲಾಯಿತು.
ಇದಕ್ಕೂ ಮುನ್ನ ವಿದ್ಯಾರ್ಥಿನಿ ತಂದೆ- ತಾಯಿ ಜತೆ ಮೊಬೈಲ್ ಒದಗಿಸುವ ಬಗ್ಗೆ ಮಾತುಕತೆ ಮೂಲಕ ಒಪ್ಪಿಸಲಾಗಿತ್ತು.
ಮಾಧ್ಯಮ ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಡೆಕಲ್ ಸಂತೋಷ್, ಸುರೇಶ್ ಬಸವೇಗೌಡ, ಸತ್ಯ ಮಂಜು ಮೊಬೈಲ್ ಹಸ್ತಾಂತರಿಸಿ, ವಿದ್ಯಾರ್ಥಿನಿಗೆ ಶುಭ ಹಾರೈಸಿದರು.