ಪ್ರಕೃತಿ ಸೊಬಗಿನಿಂದ ಮನಸೆಳೆಯುವ ಕವಿಮನೆ

December 7, 2020

ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದ ಕುವೆಂಪು ಅವರು ತಾವೇ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪು ಅವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ “ಪರ್ವತಾರಣ್ಯ ಪ್ರಪಂಚ”ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ ,ಕಾದಂಬರಿ, ನಾಟಕ, ಕವಿತೆ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ ಎಲ್ಲ ಪಾತ್ರಗಳು ಈ ಅರಣ್ಯ ಸಂಸ್ಕೃತಿಯ ಪ್ರತೀಕಗಳೇ. ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನಪ್ರೀತಿಯ ವಿಸ್ತರಣೆ. ಈ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ, ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ ಆಗಿದೆ. ಮಲೆನಾಡಿನ ನಿಸರ್ಗದ ಚೆಲುವಿನ ಜೊತೆಗೆ ಅದರ ಒಡಲಿನ ಸಾಮಾಜಿಕ ಬದುಕನ್ನು, ಅದರ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಖಲಿಸುತ್ತ ಬಂದಿದ್ದಾರೆ. ಈ ಅರಣ್ಯ ಕೇಂದ್ರಿತ ಸಾಮಾಜಿಕ ಬದುಕಿನ ಮೂಲಕ ಇಡೀ ಭಾರತೀಯ ಸಾಮಾಜಿಕ ಹಾಗು ಸಾಂಸ್ಕೃತಿಕ ಜೀವನದ ಪಲ್ಲಟಗಳೂ, ತಲ್ಲಣಗಳೂ ಅವರ ಗ್ರಹಣ ಶಕ್ತಿಯಿಂದ ವ್ಯಕ್ತವಾಗಿದೆ. ಅವರ ಸೃಜನಶೀಲ ಪ್ರತಿಭೆ ಪೂರ್ವ ಪಶ್ಚಿಮಗಳ ಚಿಂತನಗಳಿಂದ ಶ್ರೀಮಂತವಾಗಿದೆ. ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಗೌರವ ಸ್ಥಾನವನ್ನು ತಂದುಕೊಟ್ಟಿದೆ. ರಸಋಷಿಯ ಸಾಹಿತ್ಯವೆಲ್ಲವೂ ಒಂದರ್ಥದಲ್ಲಿ ಸ್ವಾತಂತ್ರ ಪೂರ್ವದ ಆಶೋತ್ತರಗಳ ಅಭಿವ್ಯಕ್ತಿಯಾಗಿ ಮತ್ತು ಸ್ವಾತಂತ್ರ್ಯ ಭಾರತದ ವಾಸ್ತವವನ್ನು ಕುರಿತ ವಿಮರ್ಶೆಯಾಗಿ ತೋರುತ್ತದೆ. ಹಾಗೆಯೇ ಸಾಹಿತ್ಯ ನಿರ್ಮಿತಿಯ ನೆಲೆಯಲ್ಲಿ ಈ ದೇಶದ ಪರಂಪರೆಗೆ ಅವರು ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳು ಮತ್ತು ಜಾಗತಿಕ ಪ್ರಜ್ಞೆಯನ್ನು ಅವರನ್ನು ಅರಗಿಸಿಕೊಂಡ ಕ್ರಮಗಳು ಹಾಗೂ ಯುಗ ಪರಿವರ್ತನೆಯ ಸೂಕ್ಷ್ಮತೆಗಳಿಗೆ ಸ್ಪಂದಿಸುತ್ತ ಅವುಗಳನ್ನು ಗುರುತಿಸಿ ತಮ್ಮ ಬರಹದ ಮೂಲಕ ಅದಕ್ಕೆ ಹೊಂದುವಂತೆ ಜನಮನವನ್ನು ಸಜ್ಜುಗೊಳಿಸಿದ ಪ್ರಯತ್ನಗಳು ಕುವೆಂಪು ಅವರನ್ನು ಈ ಯುಗಮಾನದ ಮಹತ್ವದ ಲೇಖಕರನ್ನಾಗಿ ಮಾಡಿವೆ. ಆಧ್ಯಾತ್ಮ, ವ್ಯೆಚಾರಿಕತೆ, ಗಾಢವಾದ ನಿಸರ್ಗ ಪ್ರೀತಿಗಳಲ್ಲಿ ಬೇರೂರಿರುವ ಅವರ ಸಾಹಿತ್ಯ ನಮ್ಮ ಪರಂಪರೆಯನ್ನು, ಸಾಮಾನ್ಯ ಜನರ ಬದುಕನ್ನು ನಿರ್ದೇಶಿಸಿದಂತೆಯೇ ಶೋಷಣೆಗೂ ಒಳಗು ಮಾಡಿದ ಪರಂಪರೆಯನ್ನು ತೀಕ್ಷ್ಣ ಹಾಗು ಚಿಕಿತ್ಸಕ ದೃಷ್ಠಿಯಿಂದ ಕಂಡಿದೆ. ಅಲ್ಲದೆ, ಸರ್ವೋದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿತ್ವದ ಮುಕ್ತ ಬೆಳವಣಿಗೆಯ ಕಾಳಜಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕುವೆಂಪು ಅವರ ಚಿಂತನೆ, ಅವರ ಕೊನೆಯ ವರ್ಷದಲ್ಲಿ, ದ್ವೇಷ, ಭಾಷೆ, ಜಾತಿ, ಮತ ಸಿದ್ಧಾಂತಗಳ ಹಾಗು ತಮಗೆ ಅತ್ಯಂತ ಪ್ರಿಯವಾದ ಸಾಹಿತ್ಯದ ಮೇರಯನ್ನು ದಾಟಿತ್ತು. ವಿಶ್ವದೃಷ್ಟಿಯನ್ನು ಹೊಂದಿತ್ತು. ಅದರ ಫಲವೇ ವಿಶ್ವಮಾನವ ಸಂದೇಶ, ಇದರ ಗೌರವಾರ್ಥವಾಗಿ ಕುವೆಂಪುರವರಿಗೆ ‘ವಿಶ್ವಮಾನವ’ ಎಂಬ ಬಿರುದಿದೆ.

ಕುವೆಂಪು ಅವರ ಕೃತಿಗಳು

 1. ಶ್ರೀ ರಾಮಾಯಣದರ್ಶನಂ-ಮಹಾಕಾವ್ಯ. (ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
 2. ಕಾನೂರು ಹೆಗ್ಗಡಿತಿ (ಕಾದಂಬರಿ)
 3. ಮಲೆಗಳಲ್ಲಿ ಮದುಮಗಳು (ಕಾದಂಬರಿ)
 4. ನೆನಪಿನ ದೋಣಿಯಲ್ಲಿ (ಆತ್ಮಚರಿತ್ರೆ)
 5. ಕವನಸಂಗ್ರಹಗಳು.
 6. ನಾಟಕಗಳು.
 7. ಕಾವ್ಯ ಮೀಮಾಂಸೆ ಹಾಗು ವಿಮರ್ಶಾಕೃತಿಗಳು.
 8. ವೈಚಾರಿಕ ಲೇಖನಗಳು.
 9. ಮಲೆನಾಡಿನ ಚಿತ್ರಗಳು (ಲಲಿತ ಪ್ರಬಂಧಗಳು)
 10. ಕಥಾಸಂಕಲನಗಳು.
 11. ಜೀವನ ಚರಿತ್ರೆಗಳು.

ಕುವೆಂಪುರವರಿಗೆ ಸಂದ ಗೌರವ ಪ್ರಶಸ್ತಿಗಳು

 • 1956-ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ.
 • 1957-ಧಾರವಾಡದಲ್ಲಿ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯ್ಕಕ್ಷ ಪದವಿ.
 • 1964-ರಾಜ್ಯ ಸರ್ಕಾರದಿಂದ ರಾಷ್ಟ್ರ ಕವಿ ಬಿರುದಿನ ಗೌರವ.
 • 1968-ಶ್ರೀ ರಾಮಾಯಣದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ.
 • 1968-ರಾಷ್ಟ್ರಪತಿಗಳಿಂದ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ.
 • 1988-ಕರ್ನಾಟಕ ಸರ್ಕಾರದ ಪ್ರಥಮ ಪಂಪ ಪ್ರಶಸ್ತಿ ಪ್ರದಾನ.
 • 1992-ಕರ್ನಾಟಕ ಸರ್ಕಾರದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ.
 • 1956ರಿಂದ95-೮ ಬೇರೆ-ಬೇರೆ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಹುಟ್ಟಿ ಬೆಳದದ್ದು ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ ತಾಲುಕಿನ ಕುಪ್ಪಳ್ಳಿ[೧] ಎಂಬ ಗ್ರಾಮದಲ್ಲಿ. ರಾಷ್ಟ್ರಕವಿ ಹುಟ್ಟಿ ಬೆಳದದ್ದು ಕುಪ್ಪಳ್ಳಿ ಮನೆಯಲ್ಲಿ , ಅದು ಈಗ “ಕವಿ ಮನೆ “ಎಂದೇ ಪ್ರಸಿದ್ದವಾಗಿದೆ. ಕ್ರಿ.ಸ ೨೦೦೧ರಲ್ಲಿ ಕವಿ ಮನೆಯನ್ನು ಪುನರ್ ನಿರ್ಮಿಸಿ ಪ್ರತಿಷ್ಟಾಪಿಸಲಾಯಿತು. ೧೫೦ ವರ್ಷಗಳಿಂದ ಕುವೆಂಪುರವರ ಅಜ್ಜ, ಮುತ್ತಜ್ಜಂದಿರು ಬಾಳಿ ಬದುಕಿದ ಮನೆ,ಇದು ಮಲೆನಾಡಿನ ಹಸಿರಲ್ಲಿ ಕಂಗೊಳಿಸುತ್ತ ಇಂದು ಕೂಡ ಪ್ರವಾಸಿಗರ ಕಣ್ಣು ಸೆಳೆಯುತ್ತದೆ.

“ಕಾಡು ಮತ್ತು ಕೊಡತಲಿರುವ ಸೊಬಗವೀಡು ನನ್ನ ಮನೆ” -ಕುವೆಂಪು.

ಇಂತಹ ೧೫೦ ವರ್ಷಗಳ ಹಳೆಯ ಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು,ಮದ್ಯ ಒಳ ಅಂಗಳ ಇರುವ ಈ ಮನೆ,ಆ ಕಾಲದ ಮಲೆನಾಡಿನ ಜಮೀನುದರರ ಮನೆಯ ಮಾದರಿಯಾಗಿದೆ. ಭೀಮ ಗಾತ್ರದ ಮುಂಡಿಗೆಗಳು ಕೆತ್ತನೆ ಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠ ಶಿಲ್ಪ ವೈಭವವನ್ನು ನೆನಪಿಸುವಂತಿದೆ.ಕುವೆಂಪು ಅವರು ಕುಪ್ಪಳ್ಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದವನ್ನು ವೀಕ್ಷಿಸುತ್ತಿದ್ದ ಪೂರ್ವ ದಿಕ್ಕಿಗೆ ತೆರೆದುಕೊಂದಿರುವ ಮಹಡಿ, ‘ಮನೆಯ ಶಾಲೆ’ ನೆಡುಸುತ್ತಿದ್ದ ಸ್ಥಳ, ‘ಅಜ್ಜಯ್ಯನ ಅಭ್ಯಂಜನದ’ ಬಚ್ಚಲು ಮನೆ, ಕೊಳ,ಮನೆಯ ಸಮೀಪದ ಕೆರೆ ಇವು ಸಂದರ್ಶಕರನ್ನು ಭಾವ ಪರವಶವನ್ನಾಗಿಸುತ್ತವೆ.ಕುವೆಂಪು ಅವರ ವಿವಾಹ ನಡೆದ ಮರದ ಮಂಟಪ, ಮೈಸೂರಿನ ಮನೆಯಲ್ಲಿ ಕುವೆಂಪುರವರು ಬಳಸುತ್ತಿದ್ದ ದಿನನಿತ್ಯದ ಬಳುಸುತ್ತಿದ್ದ ವಸ್ತುಗಳು ಮತ್ತು ಅವರಿಗೆ ಬಂದ ಪ್ರಶಸ್ತಿಗಳನ್ನು ಮಹಡಿಯಲ್ಲಿ ಪ್ರದರ್ಶಿಸಲಾಗಿದೆ. ಅವರ ವಸ್ತುಗಳ ಮೊದಲ ಆವೃತ್ತಿಗಳೂ, ಕೆಲವು ಹಸ್ತ ಪ್ರತಿಗಳೂ ಇಲ್ಲಿವೆ. ಕೆಳ ಅಂತಸ್ತಿನ ಹಿಂಬದಿಯ ಹಜಾರದಲ್ಲಿ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಸಂಗ್ರಹಿಸಿರುವ ಕುವೆಂಪು ಅವರ ಚಿಕ್ಕವಯಸ್ಸಿನ ಫೋಟೋಗಳು, ಅವರ ಮಕ್ಕಳು, ಮೊಮ್ಮಕ್ಕಳು, ಬಂದುಗಳ ಛಾಯಚಿತ್ರಗಳು, ಕವಿಯ ಬದುಕಿನ ಕೆಲವು ಅವಿಸ್ಮರಣೀಯ ಘಳಿಗೆಗಳ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಕುವೆಂಪು ಅವರ ಕಾಲದಲ್ಲಿ ಮಲೆನಾಡಿನ ಮನೆಗಳಲ್ಲಿ ಬಳಸುತ್ತಿದ್ದ ಗೃಹ ಉಪಯೋಗಿ ವಸ್ತುಗಳನ್ನು, ವ್ಯವಸಾಯದ ಸಲಕರಣೆಗಳನ್ನು ಸಹಾ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.

ಕುವೆಂಪು ಅವರು ಬಳಸುತ್ತಿದ್ದ ಎಲ್ಲಾ ದಿನಚರಿ ವಸ್ತುಗಳನ್ನು ಒಂದು ಮರದ ಶೋಕೇಸಿನಲ್ಲಿ ಇರಿಸಲಾಗಿದೆ. ಇದರಲ್ಲಿ ಕುವೆಂಪು ಅವರು ಉಪಯೋಗಿಸುತಿದ್ದ ಪಂಚೆ, ಚಪ್ಪಲಿ, ಬಿಳಿಯ ನಿಲುವಂಗಿ, ಶಾಲು, ಲೋಟ, ಕೊಡೆ, ಕೊಡೆಯಲ್ಲಿ ಸಣ್ಣ, ಮಧ್ಯಮ ಹಾಗು ದೊಡ್ಡ ಗಾತ್ರದ ಕೊಡೆ. ಆ ಕೊಡೆಯನ್ನು ಊರುಗೋಲಾ ಗಿ ಕೂಡ ಬಳಸುತಿದ್ದರು. ಜರಿಯ ರುಮಾಲು, ಕೈವಸ್ತ್ರವನ್ನು ಕಾಣಬಹುದು.ಆ ಶೋಕೇಸಿನ ಮೇಲ್ಬಾಗದಲ್ಲಿ ರಸಕವಿಯ ಪುತ್ತಳಿಕೆ, ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆಯುವಾಗ ಧರಿಸಿದ ವಸ್ತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಶೋಕೇಸಿನಲ್ಲಿ ಕವಿಯ ಕೂದಲು ಕೂಡ ಇರುವುದು ವಿಶೇಷವಾಗಿದೆ.

ಶೋಕೇಸಿನಲ್ಲಿ ವಿಶ್ವಮಾನವನಿಗೆ ಸಂದ ಪ್ರಶಸ್ತಿಗಳು ಹಾಗು ನೆನಪಿನ ಕಾಣಿಕೆಗಳನ್ನು ಪ್ರದರ್ಶಿಸಲಾಗಿದೆ. ಇದು ಕುವೆಂಪುರವರ ಜೀವನಮಾನ ಸಾಧನೆ, ಸಾಹಿತ್ಯ ಕೃಷಿಯಲ್ಲಿ ಸಂದ ಗೌರವಗಳ ಪ್ರತೀಕವಾಗಿದೆ. ಇಲ್ಲಿ ಹಲವು ನೆನಪಿನ ಕಾಣಿಕೆಗಳು ಕರ್ನಾಟಕದ ಉಚ್ಚ ಪ್ರಶಸ್ತಿ ಕರ್ನಾಟಕ ರತ್ನ ವನ್ನು ಕಾಣಬಹುದು. ಇದು ನೋಡುಗರ ಬಹು ಮುಖ್ಯ ಕೇಂದ್ರ ಬಿಂದು ಎಂದರೆ ತಪ್ಪಾಗಲಾರದು.

ಗಲ್ಲಾಪೆಟ್ಟಿಗೆ: ಇದನ್ನು ಓದಲು, ಬರೆಯಲು, ಹಾಗು ಲೆಕ್ಕ ಪತ್ರಗಳನ್ನು ಇಡಲು ಉಪಯೋಗಿಸಲಾಗುತ್ತದೆ. ಇಲ್ಲಿ ಇರುವ ಮರದ ಮೇಜಿನ ಕೆಳಗೆ ಮುಖ್ಯ ಪತ್ರಗಳನ್ನು ಇಡಲು ಅನುಕೂಲವಿದೆ.

ಈ ಚಿತ್ರದಲ್ಲಿ ವಿವಿಧ ಅಳತೆಯ ಅನ್ನ ಬಸೆಯುವ ಬಟ್ಟಲನ್ನು ಕಾಣಬಹುದು, ಅದಕ್ಕೆ ಸರಿಯಾಗುವಂತೆ ಬಸೆಯುವ ಕೋಲು ಕೂಡ ಇಡಲಾಗಿದೆ, ಇದನ್ನು ಕೆಲವನ್ನು ಹಬ್ಬ ಹರಿದಿನದಂದು, ಮತ್ತೆ ಕೆಲವನ್ನು ದಿನನಿತ್ಯ ಮಲೆನಾಡಿನಲ್ಲಿ ಬಳಸುತಾರೆ. ಮಲೆನಾಡಿನಲ್ಲಿ ಬಳಸುವ ಅನ್ನದ ಸರಗೋಲುನ್ನು ಕೂಡ ಇಡಲಾಗಿದೆ.

ಮಾಹಿತಿ : ತೀರ್ಥಹಳ್ಳಿಯಿಂದ ಕೊಪ್ಪ ಮಾರ್ಗವಾಗಿ 15 ಕಿ.ಮೀ ಕ್ರಮಿಸಿದರೆ ಎಡಕ್ಕೆ ಕುಪ್ಪಳ್ಳಿಗೆ ಹೋಗುವ ದಾರಿ ಸಿಗುತ್ತದೆ. ಅಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಕವಿಮನೆ ಇದೆ. ಹತ್ತಿರದ ರೈಲು ನಿಲ್ದಾಣ, ಶಿವಮೊಗ್ಗ 80ಕಿ.ಮೀ ಇದೆ. ತೀರ್ಥಹಳ್ಳಿಗೆ ಬಸ್ಸಿನಲ್ಲಿ ಪ್ರಯಾಣಿಸಬಹುದು. ಹತ್ತಿರದಲ್ಲಿ ಮಂಗಳೂರು ವಿಮಾನ ನಿಲ್ದಾಣ 140ಕಿ.ಮೀ ದೂರ ಇದೆ. ಬೆಂಗಳೂರಿನಿಂದ ಪ್ರತಿ ದಿನ ಕುಪ್ಪಳಿಗೆ ನೇರ ಸುವಿಹಾರಿ ಬಸ್ಸಿದೆ. ಪ್ರವಾಸಿಗರು ಮುಂಚಿತವಾಗಿ ತಿಳಿಸಿದರೆ ಕುಪ್ಪಳ್ಳಿಯಲ್ಲಿ ತಂಗಲು ಸೌಕರ್ಯವಿದೆ. ಊಟ ತಿಂಡಿಗಳಿಗಾಗಿ ಕ್ಯಾಂಟೀನ್ ಸೌಲಭ್ಯ ಕೂಡ ಇದೆ.

error: Content is protected !!