ನಿಯಮ ಬಾಹಿರವಾಗಿ ಭೂಮಿ ಮಾರಾಟ ಮಾಡಿದ ಮಾಜಿ ಯೋಧ : ಅರಶಿನಗುಪ್ಪೆ ಗ್ರಾಮಸ್ಥರ ಆರೋಪ

07/12/2020

ಮಡಿಕೇರಿ ಡಿ.7 : ಮಾಜಿ ಯೋಧರ ಕೋಟಾದಡಿ ಉತ್ತರಕೊಡಗಿನ ತೊರೆನೂರು ಗ್ರಾ.ಪಂ ವ್ಯಾಪ್ತಿಯ ಅರಶಿನಗುಪ್ಪೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಮಂಜೂರಾದ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಳ್ಳದೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು, ದಟ್ಟ ಅರಣ್ಯವಿರುವ ಈ ಪ್ರದೇಶದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ತಾವೇ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೊರೆನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ಸ್ಥಳೀಯ ನಿವಾಸಿ ಪಿ.ಡಿ.ರವಿಕುಮಾರ್, ತೊರೆನೂರು ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಏಕರೆ ಜಾಗವನ್ನು ಮಾಜಿ ಯೋಧರ ಕೋಟಾದಡಿ ಭಾಸ್ಕರ್ ಸಿಂಗ್ ಎಂಬುವವರಿಗೆ 1967 ರಲ್ಲಿ ಸರ್ಕಾರ ಮಂಜೂರು ಮಾಡಿಕೊಟ್ಟಿದೆ. ಈ ಜಾಗವನ್ನು 53 ವರ್ಷ ಕಳೆದರೂ ಸಂಬಂಧಪಟ್ಟ ವ್ಯಕ್ತಿ ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. ಆದರೆ ಇತ್ತೀಚೆಗೆ ಜಾಗವನ್ನು ನಿಯಮ ಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಮಂಜೂರಾದ ಜಾಗ ಒಳಗೊಂಡಂತೆ ಉಳಿದ ಜಾಗದಲ್ಲಿ ಸಾಕಷ್ಟು ಹಸಿರ ಪರಿಸರ ಸೃಷ್ಟಿಯಾಗಿದೆ. ಸರಕಾರದಿಂದ ಮಂಜೂರಾದ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಳ್ಳದಿದ್ದಲ್ಲಿ ಅದರ ಹಕ್ಕು ಸಂಬಂಧಿಸಿದ ವ್ಯಕ್ತಿಗೆ ದೊರಕುವುದಿಲ್ಲ ಮತ್ತು ಅದನ್ನು ಮಾರಾಟ ಮಾಡಲು ಅವಕಾಶವಿಲ್ಲ. ಹೀಗಿದ್ದೂ ಮಾಜಿ ಯೋಧರ ಕೋಟಾದಲ್ಲಿ ಮಂಜೂರಾದ ಜಾಗವನ್ನು ಮಾರಾಟ ಮಾಡಲಾಗಿದೆ ಮತ್ತು ಅದು ನೋಂದಣಿಯೂ ಆಗಿದೆ ಎಂದು ಗಮನ ಸೆಳೆದ ಅವರು, ಈ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಸ್ತುತ ಖರೀದಿ ಮಾಡಿರುವ ವ್ಯಕ್ತಿ ಸುತ್ತಮುತ್ತಲ ಅಂದಾಜು ನಲ್ವತ್ತು ಏಕರೆ ಪ್ರದೇಶಕ್ಕೆ ಬೇಲಿ ಹಾಕಿ ಸ್ವಾಧೀನ ಪಡೆಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ ರವಿಕುಮಾರ್, ತಕ್ಷಣ ಬೇಲಿಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಕಂದಾಯ, ಅರಣ್ಯ ಅಧಿಕಾರಿಗಳು ಹಾಗೂ ಲೋಕಾಯುಕ್ತಕ್ಕೆ ಮನವಿ ಮತ್ತು ದೂರನ್ನು ನೀಡಿದ್ದರು ಇಲ್ಲಿಯವರೆಗೂ ಸೂಕ್ತ ಸ್ಪಂದನ ದೊರಕಿಲ್ಲ. ಮಾಜಿ ಯೋಧರಿಗೆ ಮಂಜೂರಾದ ಜಾಗ ಅರಣ್ಯ ಪ್ರದೇಶಕ್ಕೆ ಸೇರಿದ್ದರೂ ಆರ್‍ಟಿಸಿಯಲ್ಲಿ ಜೋಳದ ಕೃಷಿ ಎಂದು ನಮೂದಾಗಿದೆ. ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕೆಂದರು.
ಅರಣ್ಯ ನಾಶವಾದಲ್ಲಿ ಅಲ್ಲಿನ ಕಾಡಾನೆಗಳು ಕೃಷಿ ಭೂಮಿಯ ಮೇಲೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಿದೆ. ಇದರಿಂದ ಕೃಷಿಕರು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತವೆಂದು ಆತಂಕ ವ್ಯಕ್ತಪಡಿಸಿದ ರವಿಕುಮಾರ್, ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡದಿದ್ದಲ್ಲಿ ಗ್ರಾಮಸ್ಥರೇ ಜಾಗವನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಉದಯಕುಮಾರ್ ಹೆಚ್.ಆರ್, ಡನೇಶ್ ಡಿ.ಎ, ಕಿಶೋರ್ ಕೆ.ಕೆ ಹಾಗೂ ಸತೀಶ್ ಎಂ.ಕೆ ಉಪಸ್ಥಿತರಿದ್ದರು.