ತಲಕಾವೇರಿಗೆ ಬಸ್ ಸಂಚಾರ ಸ್ಥಗಿತ : ಪ್ರತಿಭಟನೆಯ ಎಚ್ಚರಿಕೆ ನೀಡಿದ ಜೆಡಿಎಸ್

07/12/2020

ಮಡಿಕೇರಿ ಡಿ.7 : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ಭಕ್ತರಿಗೆ ಹಾಗೂ ಈ ಮಾರ್ಗದ ಗ್ರಾಮಸ್ಥರಿಗೆ ತೊಂದರೆಯಾಗಿದ್ದು, ತಕ್ಷಣ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಂದಿನ ಒಂದು ವಾರದೊಳಗೆ ಬಸ್ ಸಂಚಾರ ಆರಂಭಿಸದಿದ್ದಲ್ಲಿ ಗ್ರಾಮಸ್ಥರ ಬೆಂಬಲದೊಂದಿಗೆ ಮಡಿಕೇರಿ ಕೆಎಸ್‍ಆರ್‍ಟಿಸಿ ಡಿಪೋ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಷ್ಟದ ಭೀತಿಯಿಂದ ಖಾಸಗಿ ಬಸ್ ಗಳ ಸಂಚಾರವೂ ಸ್ಥಗಿತಗೊಂಡಿದೆ. ಆದರೆ ಜನಸೇವೆಗಾಗಿ ಮೀಸಲಾಗಿರುವ ಸರ್ಕಾರಿ ಬಸ್ ಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಿರುವುದು ಖಂಡನೀಯ. ತಲಕಾವೇರಿ ಮಾರ್ಗದಲ್ಲಿ ಕೋವಿಡ್ ಕಾರಣಕ್ಕಾಗಿ ಬಸ್ ಗಳು ಸಂಚರಿಸದೆ ಒಂಭತ್ತು ತಿಂಗಳುಗಳೇ ಕಳೆದಿದೆ. ಈ ನಡುವೆ ಗ್ರಾಮಸ್ಥರು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಆದರೆ ಕೆಎಸ್‍ಆರ್‍ಟಿಸಿ ಗ್ರಾಮಸ್ಥರ ಮನವಿಯನ್ನು ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗಣೇಶ್, ಪವಿತ್ರ ಕ್ಷೇತ್ರಕ್ಕೆ ಬಸ್ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ಭಕ್ತರಿಗೆ ಖಾಸಗಿ ವಾಹನಗಳಲ್ಲಿ ತೆರಳಲು ಸಾಧ್ಯವಾಗದೆ ಕಷ್ಟ ಅನುಭವಿಸುವಂತ್ತಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರ ಭಾವನೆಗೆ ಮತ್ತು ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಸ್ಪಂದಿಸಬೇಕೇ ಹೊರತು ಸಾರ್ವಜನಿಕ ಸೇವೆಯಲ್ಲೂ ಲಾಭ, ನಷ್ಟದ ಲೆಕ್ಕಾಚಾರ ಮಾಡಬಾರದೆಂದು ಅವರು ಹೇಳಿದ್ದಾರೆ.
ಭಾಗಮಂಡಲದವರೆಗಷ್ಟೇ ಒಂದೆರೆಡು ಬಸ್‍ಗಳು ಬರುತ್ತಿದ್ದು, ಇವುಗಳು ಸೇರಿದಂತೆ ಮತ್ತಷ್ಟು ಹೆಚ್ಚುವರಿ ಬಸ್‍ಗಳನ್ನು ತಲಕಾವೇರಿಗೆ ನಿಯೋಜಿಸುವ ಮೂಲಕ ಕೆಎಸ್‍ಆರ್‍ಟಿಸಿ ಜನಪರ ಕಾಳಜಿಯನ್ನು ತೋರಬೇಕೆಂದು ಒತ್ತಾಯಿಸಿದ್ದಾರೆ.
::: ವಿದ್ಯುತ್ ಬಿಲ್ ಕಿರಿಕಿರಿ :::
ದುಬಾರಿ ವಿದ್ಯುತ್ ಬಿಲ್ ನೀಡುತ್ತಿರುವ ಚೆಸ್ಕಾಂ ಇಲಾಖೆ ಹಣ ಪಾವತಿಸಲು ಸ್ವಲ್ಪ ತಡವಾದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ವಾಣಿಜ್ಯೋದ್ಯಮಿಗಳಿಗೆ ಹಾಗೂ ವರ್ತಕರಿಗೆ ಕಿರುಕುಳ ನೀಡುತ್ತಿದೆ ಎಂದು ಗಣೇಶ್ ಆರೋಪಿಸಿದ್ದಾರೆ.
ಕೋವಿಡ್ ಕಾರಣದಿಂದ ವರ್ತಕರು ಹಾಗೂ ಹೊಟೇಲ್ ಉದ್ಯಮಿಗಳು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಈ ನಡುವೆಯೇ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಕಡಿತಗೊಳಿಸಿ ತೊಂದರೆಗೆ ಸಿಲುಕಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು ಬಲವಂತದಿಂದ ಶುಲ್ಕ ಸಂಗ್ರಹಕ್ಕೆ ಮುಂದಾದರೆ ಚೆಸ್ಕಾಂ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.